ಮೂಡಿಗೆರೆ : ಹೋಟೇಲ್ ಬೇಕರಿಗಳಲ್ಲಿ ಶುಚಿತ್ವದ ಕಡೆ ನಿರ್ಲಕ್ಷ್ಯ ಸಾರ್ವಜನಿಕರ ಆಕ್ರೋಶ!

613
firstsuddi

ಮೂಡಿಗೆರೆ: ಪಟ್ಟಣದ ವಿವಿದ ಕಡೆಗಳಲ್ಲಿ ನಡೆಸುತ್ತಿರುವ ಹೋಟೆಲ್ ಬೇಕರಿಗಳಲ್ಲಿ ಶುಚಿತ್ವಕ್ಕೆ ಮಹತ್ವವನ್ನು ಕೊಡದೇ ಅಮಾಯಕ ಸಾರ್ವಜನಿಕರ ಜೀವ ಮತ್ತು ಆರೋಗ್ಯದಲ್ಲಿ ಆಟವಾಡುತ್ತಿರುವ ಇವರ ಮೇಲೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ಅದಕ್ಕೆ ಇದೇ ಅಧಿಕಾರಿಗಳೇ ಕುಮ್ಮಕ್ಕನ್ನು ನೀಡುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇಲ್ಲಿ ಬಹುತೇಕ ಹೋಟೇಲ್ ಬೇಕರಿಗಳಲ್ಲಿ ಬಿಡುವಿಲ್ಲದ ವ್ಯಾಪಾರ ವಹಿವಾಟು ನಡೆಸುತ್ತಿದ್ದು ಇಲ್ಲಿ ಇವರಿಗೆ ವ್ಯಾಪಾರ ಒಂದನ್ನು ಬಿಟ್ಟರೆ ಜನರ ಆರೋಗ್ಯ ಮತ್ತು ಶುಚಿತ್ವ ಅಗತ್ಯವಿಲ್ಲದಂತೆ ತೋಚುತ್ತಿದೆ. ಪಟ್ಟಣದಲ್ಲಿ ದಿನನಿತ್ಯದ ಕೆಲಸಕ್ಕೆ ಬಂದವರು ಹೊಟ್ಟೆ ಹಸಿದಾಗ ಇಲ್ಲಿಗೆ ಬಂದಂತಹ ಸಾವಿರಾರು ಜನರು ಹೋಟೆಲಿನಲ್ಲಿ ತಿನ್ನುವುದು ಅದಲ್ಲದೇ ಪಟ್ಟಣಕ್ಕೆ ಬಂದಿದ್ದರಿಂದ ಇಲ್ಲಿರುವ ಬೇಕರಿಗಳಲ್ಲಿ ತಿಂಡಿ ತಿನಿಸುಗಳನ್ನು ತಮ್ಮ ಮನೆಗೆ ಕೊಂಡಯ್ಯುವುದು ಇದರಿಂದ ಇಲ್ಲಿ ಇವರ ಆರೋಗ್ಯ ಕೆಡುವುದಲ್ಲದೇ ಮನೆಯಲ್ಲಿರುವ ಮಕ್ಕಳು ಹಾಗೂ ಹಿರಿಯರ ಆರೋಗ್ಯ ಕೆಡಿಸಲು ಕಟ್ಟಿಕೊಂಡುಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ತಪ್ಪಾಗಲಾರದು.

ಈ ಕುರಿತು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಕಿಸಾನ್ ಕಾಂಗ್ರೇಸ್ ಮುಖಂಡರಾದ ಬ್ರಿಜೇಶ್ ಕಡಿದಾಳ್ ಅವರು ಪಟ್ಟಣದಲ್ಲಿ ಕಾರ್ಯನಿರ್ವಹಿಸುವ ಬಹುತೇಕ ಹೋಟೇಲ್ ಗಳಲ್ಲಿ ಅಡುಗೆ ಕೋಣೆ ಕೊಳೆತು ಅಶುದ್ದಿಯಿಂದ ಕೂಡಿದ್ದು ಮಳೆ ಬಂದರೆ ಸಾಕು ಮೇಲಿನಿಂದ ಮಳೆಯ ನೀರು ಹೆಂಚು ಅಥವಾ ಸಿಮೆಂಟ್ ಶೀಟ್ ಗಳಲ್ಲಿ ಬಿದ್ದು ಅದು ನೇರ ಅಡುಗೆ ಕೋಣೆಯಲ್ಲಿಟ್ಟ ಪದಾರ್ಥಗಳಿಗೆ ಬಿದ್ದು ಅದರಲ್ಲಿ ಮಿಶ್ರಗೊಳ್ಳುವುದಲ್ಲದೇ ಇಂತಹ ಅಹಾರ ಸೇವಿಸಲು ಬಂದರೆ ಅವರಿಗೆ ರೋಗ ಕಟ್ಟಿಟ್ಟ ಬುತ್ತಿ ಇದರ ಬಗ್ಗೆ ಇಲ್ಲಿನ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕರ ಬೇಜವಬ್ದಾರಿಯೇ ಇದಕ್ಕೆಲ್ಲ ಕಾರಣ.

ಈ ಮೊದಲು ಪೋಲಿಸ್ ಠಾಣೆ ಪಕ್ಕದಲ್ಲಿರುವ ಬೇಕರಿಯಲ್ಲಿ ಚಾಕಲೇಟಿನಲ್ಲಿ ಒಂದು ಹುಳ ಸಿಕ್ಕಿದ್ದು, ಅದು ಅಲ್ಲದೇ ಕೆಲವು ದಿನಗಳ ಹಿಂದೆ ಇಲ್ಲಿನ ಬಸ್ ಸ್ಠಾಂಡ್ ಪಕ್ಕದಲ್ಲಿರುವ ಸದಾ ಜನಜಂಗುಳಿಯಿಂದ ಕೂಡಿದ ಕೆಲವೊಂದು ಬೇಕರಿಗಳಿದ್ದು, ಅದರಲ್ಲೊಂದಾದ ಬೇಕರಿಯಲ್ಲಿ ಇಲ್ಲಿನ ಒಂದು ಮಹಿಳೆ ಮಾಲ್ಪೂರಿ ಎಂದು ಕರೆಯುವ ಸಿಹಿ ತಿಂಡಿ ಕೊಂಡಿದ್ದು, ಅದರಲ್ಲಿಯೂ ಸಹ ಹುಳ ಸಿಕ್ಕಿರುವ ಕುರಿತು ನಮಗೆ ಮಾಹಿತಿ ಇದ್ದು, ಇಷ್ಟಾದರು ಇಂತಹ ವಿಷಯದಲ್ಲಿ ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದ್ದರು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಪಾತ್ರವೇನು ಎಂದು ನಮಗೆ ತಿಳಿಯದಾಗಿದೆ ಎಂದರು.

ವಿಚಾರದ ಕುರಿತು ಮಾತನಾಡಿದ ಜಯ ಕರ್ನಾಟಕ ಸಂಘದ ಮುಖಂಡರಾದ ಬಿಳ್ಳೂರು ಮುರಳಿ, ಇಲ್ಲಿ ಇಂತಹ ವಿಷಯದ ಬಗ್ಗೆ ಆರೋಗ್ಯಾಧಿಕಾರಿಗಳ ಪಾತ್ರ ಬಹು ಮುಖ್ಯ. ಆದರೆ ಇಲ್ಲಿ ಕೆಲವು ಹೋಟೆಲ್‍ಗಳಲ್ಲಿ ಕುಡಿಯಲು ಸಹ ಶುದ್ದವಾದ ನೀರನ್ನು ಕೊಡುವುದಿಲ್ಲ. ಕೇವಲ ಕಣ್ಣಿಗೆ ಮಣ್ಣೆರುಚುವ ರೀತಿ ಇಲ್ಲಿನ ಹೋಟೇಲ್ ಮಾಲಿಕರು ಕುಡಿಯಲು ಇಟ್ಟ ನೀರಿನ ಶುದ್ದಿಕರಣ ಹಾಳಾಗಿ ವರ್ಷಗಳೇ ಕಳೆದರು ಅದನ್ನು ಜನರಿಗೆ ತೋರಿಕೆಯ ರೀತಿಯಲ್ಲಿ ಇಟ್ಟು ಅದರ ಎಲ್ಲಾ ಸಂಪರ್ಕಗಳನ್ನು ಕಡಿತಗೊಳಿಸಿ ಹಾಗೆಯೇ ಇಟ್ಟು ಅದಕ್ಕೆ ನೇರವಾಗಿ ಪಟ್ಟಣ ಪಂಚಾಯಿತಿ ಸರಬರಾಜು ಮಾಡುವ ನೀರಿನ ಪೈಪನ್ನು ಅದರ ಗಾತ್ರಕ್ಕೆ ತಕ್ಕಂತೆ ಅಳವಡಿಸಿ ಜನರಿಗೆ ಮಂಕುಭೂದಿ ಎರಚುತ್ತಿದ್ದಾರೆ. ಆದರೆ ಇಂತಹ ವಿಚಾರದಲ್ಲಿ ಅತಿ ಸೂಕ್ಷ್ಮವಾಗಿ ಅಧಿಕಾರಿಗಳು ಪರಿಶೀಲಿಸಿದರೆ ಇಂತವರ ಬಂಡವಾಳ ಬಯಲಾಗುತ್ತದೆ. ಇದೆಲ್ಲದರ ಕುರಿತು ಇಲ್ಲಿನ ತಾಲ್ಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದರೆ ಇದು ನನ್ನ ವ್ಯಾಪ್ತಿಗೆ ಒಳಪಡುವುದಿಲ್ಲ ಅದು ನನಗೆ ಸೇರಿದ್ದಲ್ಲ ಎಂಬಂತಹ ಸಬೂಬನ್ನು ಇವರು ಎಲ್ಲಾ ವಿಷಯಕ್ಕೂ ಒಂದೇ ಉತ್ತರವನ್ನು ಕೊಟ್ಟು ಅಲ್ಲಿಂದ ಕಾಲ್ಕೀಳುತ್ತಾರೆ. ಆದುದರಿಂದ ತಾಲ್ಲೂಕಿನಲ್ಲಿ ಆರೋಗ್ಯದ ನಿಟ್ಟಿನಲ್ಲಿ ಸರ್ಕಾರ ವಿವಿದ ಕಾರ್ಯಕ್ರಮವನ್ನು ಏರ್ಪಡಿಸಿದ್ದರೂ ಅದು ಇಂತಹ ಆರೋಗ್ಯಧಿಕಾರಿಗಳು ಇರುವವರೆಗೂ ಅದು ಸಂಪೂರ್ಣ ಸಫಲವಾಗುವುದಿಲ್ಲ ಎಂದು ಅಸಮಾದಾನವನ್ನು ಹೊರಹಾಕಿದರು.

ಕೇವಲ ನಾಮಕಾವಸ್ಥೆಗೆ ಮಾತ್ರ ಇರುವ ಆರೋಗ್ಯ ನಿರೀಕ್ಷಕರು, ಹಾಗೂ ತಾಲ್ಲೂಕು ಆರೋಗ್ಯಧಿಕಾರಿಗಳು ಇವರ ತಮ್ಮ ತಮ್ಮ ಕೆಲಸವನ್ನು ಜವಬ್ದಾರಿತನದಿಂದ ನಿರ್ವಹಿಸಿದರೇ ಮಾತ್ರ ಇದಕ್ಕೆಲ್ಲ ಅಂತ್ಯಕಾಣಬಹುದು.ಅದನ್ನು ಬಿಟ್ಟು ಕೇವಲ ತೆರಿಗೆ ವಸೂಲಿ ಅಥವಾ ತಿಂಗಳ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಲೆಕ್ಕ ಕೊಡುವುದಕ್ಕಾಗಿ ಮಾತ್ರ ಕೆಲಸ ಮಾಡುವ ಅಧಿಕಾರಿಗಳು ಇವರಿಗೆ ಇಲ್ಲಿನ ಜನರ ಆರೋಗ್ಯದ ಬಗ್ಗೆ ಸ್ವಲ್ಪ ಮಟ್ಟಿಗೂ ಜಾಗೃತೆ ಇಲ್ಲದಾಗಿದ್ದು ಇಲ್ಲಿನ ಜನರ ದುರಾದೃಷ್ಠವಾಗಿದೆ. ಈ ಬಗ್ಗೆ ಕೂಡಲೇ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಸೂಕ್ತ ಕ್ರಮಕೈಗೊಂಡು ಇಲ್ಲಿನ ಜನರ ಹಿತ ಕಾಯಬೇಕಾಗಿದೆ.