ನಾನು ನನ್ನ ಶಕ್ತಿ ಮೀರಿ ಪ್ರಾದೇಶಿಕ ಪಕ್ಷ ಉಳಿಸಲು ಪ್ರಯತ್ನಿಸುತ್ತೇನೆ : ಹೆಚ್.ಡಿ. ದೇವೇಗೌಡ.

233
firstsuddi

ಹಾಸನ : ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು, ಕಳೆದ 15 ದಿನಗಳಿಂದ ನಾನು ಪಕ್ಷದ ಕಚೇರಿಯಲ್ಲೇ ಇದ್ದೇನೆ. ಪ್ರತಿ ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಪದಾಧಿಕಾರಿಗಳು ಮಾಡುವ ಕೆಲಸವನ್ನು ಗುರುತಿಸುತ್ತಿದ್ದೇನೆ. ನಾನು ನನ್ನ ಶಕ್ತಿ ಮೀರಿ ಪ್ರಾದೇಶಿಕ ಪಕ್ಷ ಉಳಿಸಲು ಪ್ರಯತ್ನಿಸುತ್ತೇನೆ. ನನ್ನ ಹಿಂದೆ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ರಾಷ್ಟ್ರ ರಾಜಕಾರಣದ ಬಗ್ಗೆ ಮಾತನಾಡಲು ಬೇರೆ ನಾಯಕರು ನನ್ನನ್ನು ಕರೆದರೂ ಸಹ ನಾನು ಪ್ರತಿನಿತ್ಯ ದೆಹಲಿಗೆ ಹೋಗುತ್ತಿಲ್ಲ. ಹೆಚ್. ವಿಶ್ವನಾಥ್ ಪಕ್ಷ ಬಿಟ್ಟು ಹೋದ ಮೇಲೆ ಕುಮಾರಸ್ವಾಮಿ ಪಕ್ಷ ನಿಷ್ಠೆಯಿಂದ ಇದ್ದಾರೆ. ಬಿಜೆಪಿ ಸರ್ಕಾರ ಮೂರು ವರ್ಷ 8 ತಿಂಗೂ ನಡೆಯಬಹುದು. ನಾವು ಯಾವುದೇ ತಕರಾರು ಮಾಡುವುದಿಲ್ಲ. ಒಳ್ಳೆಯ ಕೆಲಸ ಮಾಡಿದರೆ ಸಂತೋಷ ಪಡುತ್ತೇವೆ. ಜನರ ಸಮಸ್ಯೆಗಳಿಗೆ ನಾವು ಹೋರಾಡುತ್ತೇವೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಕೇಂದ್ರದಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿಸಲು ಯಡಿಯೂರಪ್ಪ ಅವರು ಶಕ್ತರು ಎಂಬ ಭರವಸೆ ಇದೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ನಾನು ಬರಕ್ಕಾಗಿ ಅವರ ಬಳಿ ರೈತರನ್ನು ಕರೆದುಕೊಂಡು ದೆಹಲಿಗೆ ಹೋಗಿದ್ದೆ. ವಿಧಾನಸಭೆ, ಲೋಕಸಭೆ ಇದ್ದರೂ ಇಲ್ಲದಿದ್ದರೂ ನಾನು ನನ್ನ ರಾಜಕಾರಣ ಮಾಡಿದ್ದೇನೆ ಎಂದು ಹೇಳಿದರು. ಈ ವೇಳೆ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಜೇಟ್ಲಿ ಅವರು ನಿಧನರಾಗಿರುವುದು ತೀವ್ರವಾಗಿ ದುಃಖವಾಗಿದೆ. ಜೇಟ್ಲಿ ಒಬ್ಬ ಮುತ್ಸದಿ ನಾಯಕ. ಯಾವುದೇ ಪಕ್ಷವಾಗಲಿ ಮಂತ್ರಿಗಳಾಗಿ ಹಲವಾರು ಇಲಾಖೆಗಳಲ್ಲಿ ಜವಾಬ್ದಾರಿ ನಿರ್ವಹಣೆ ಮಾಡಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದರು.