ನಾನು ಸಿದ್ದರಾಮಯ್ಯ ಅವರು ಸಾಕಿದ ಗಿಣಿ ಅಲ್ಲ : ಹೆಚ್.ಡಿ. ಕುಮಾರಸ್ವಾಮಿ.

244
firstsuddi

ರಾಮನಗರ : ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ. ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದನ್ನು ಸಿದ್ದರಾಮಯ್ಯ ಅವರು ಎಷ್ಟರ ಮಟ್ಟಿಗೆ ಸಹಿಸಿಕೊಂಡಿದ್ದಾರೆ ಎಂಬುವುದು ನನಗೆ ಗೊತ್ತಿಲ್ಲ. ಅವರ ಪಕ್ಷದ ಶಾಸಕರ ಬಳಿಯೇ ಪಾರ್ಲಿಮೆಂಟ್ ಚುನಾವಣೆಯ ಬಳಿಕ ಈ ಸರ್ಕಾರ ಒಂದು ಸೆಕೆಂಡ್ ಇರಲು ಬಿಡುವುದಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ.  ಸಿದ್ದರಾಮಯ್ಯ ಅವರಿಂದ ನಾನು ಮುಖ್ಯಮಂತ್ರಿಯಾಗಿಲ್ಲ. ಕಾಂಗ್ರೆಸ್ಸಿನ ಹೈ ಕಮಾಂಡ್ ತೀರ್ಮಾನ ತೆಗೆದುಕೊಂಡರು. ಹೈ ಕಮಾಂಡ್ ತೆಗೆದುಕೊಂಡ ತೀರ್ಮಾನವನ್ನು ಸಿದ್ದರಾಮಯ್ಯ ಅವರು ಸಹಿಸಿಕೊಂಡಿಲ್ಲ. ಇಲ್ಲದಿದ್ದರೆ ಈ ಸರ್ಕಾರ ಪತನವಾಗುತ್ತಿತ್ತ. ಸರ್ಕಾರ ಪತನವಾಗುವುದಕ್ಕೆ ಕಾರಣ ಯಾರು, ಯಾರು ಯಾರು ಏನೆಲ್ಲಾ ಚರ್ಚೆ ಮಾಡಿದ್ದಾರೆ ಎಂಬುವುದು ನನಗೆ ಗೊತ್ತಿಲ್ವೇ? ಎಂದು ಪ್ರಶ್ನಿಸಿದ್ದು, ಸಿದ್ದರಾಮಯ್ಯ ಮತ್ತು ಅವರಂತಹ ನೂರಾರು ಗಿಣಿಗಳನ್ನು ಸಾಕಿದಂತಹ ದೇವೇಗೌಡರಿಗೆ ಸಿದ್ದರಾಮಯ್ಯ ಅವರು ಸೇರಿದಂತೆ ಯಾರೆಲ್ಲಾ ಕುಕ್ಕಿದ್ದಾರೆ ಎಂಬುವುದು ಗೊತ್ತಿದೆ. ಅದರ ಬಗ್ಗೆ ಇತಿಹಾಸ ಬರೆಯುವವರು ಒಂದು ದಿನ ಬರೆಯುತ್ತಾರೆ. ನಾನು ಸಿದ್ದರಾಮಯ್ಯ ಅವರು ಸಾಕಿದ ಗಿಣಿ ಅಲ್ಲ. ನನ್ನನ್ನು ಈ ರಾಮನಗರ ಜಿಲ್ಲೆಯ ಜನರು ಸಾಕಿದ್ದಾರೆ. ಈ ಜಿಲ್ಲೆಯ ಜನ ಕೊಟ್ಟಿರುವ ಶಕ್ತಿಯನ್ನು ಉಪಯೋಗಿಸಿಕೊಂಡು ರಾಜ್ಯದ ರಾಜಕಾರಣದಲ್ಲಿ ಬೆಳೆದಿದ್ದೇನೆ ಎಂದರು.