ಕುಂದಾಪುರ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಅಪಘಾತಕ್ಕೀಡಾಗಿದ್ದವರ ನೆರವಿಗೆ ಧಾವಿಸಿ ಮಾನವೀಯತೆಯನ್ನು ಮೆರೆದಿದ್ದಾರೆ. ಸಚಿವ ಶ್ರೀರಾಮುಲು ಕುಂದಾಪುರದಲ್ಲಿ ನೂತನವಾಗಿ ನಿರ್ಮಿಸಲಾದ ಸರಕಾರಿ ಆಸ್ಪತ್ರೆಯ ಉದ್ಘಾಟನೆಗಾಗಿ ಉಡುಪಿಯಿಂದ ಕುಂದಾಪುರಕ್ಕೆ ತೆರಳುತ್ತಿದ್ದ ವೇಳೆ ಕೋಟೇಶ್ವರ ಬಳಿ ರಿಕ್ಷಾವೊಂದು ಡಿವೈಡರ್ ಗೆ ಡಿಕ್ಕಿಯಾಗಿ ಮಗುಚಿ ಬಿದ್ದಿದ್ದು ರಿಕ್ಷಾದಲ್ಲಿನ ಮೂವರಿಗೆ ಗಾಯವಾಗಿತ್ತು. ಅಪಘಾತ ನಡೆದಿರುವುದನ್ನು ಗಮನಿಸಿದ ಶ್ರೀರಾಮುಲು ಮತ್ತು ಉಡುಪಿ ಶಾಸಕ ರಘುಪತಿ ಭಟ್ ತಮ್ಮ ವಾಹನವನ್ನು ನಿಲ್ಲಿಸಿ ಅಪಘಾತ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ನೀರು ಕುಡಿಸಿ ಸಮಾಧಾನಪಡಿಸಿದರು. ಬಳಿಕ ಗಾಯಾಳುಗಳನ್ನು ತಾನೇ ಎತ್ತಿ ಶಾಸಕ ರಘುಪತಿ ಭಟ್ ಅವರ ಕಾರಿನಲ್ಲಿ ಕೂರಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು.











