ಹೈದರಾಬಾದ್ : ಕರ್ತವ್ಯವನ್ನು ಮರೆತು ಮೆಗಾಸ್ಟಾರ್ ಚಿರಂಜೀವಿ ಅಭಿನಯದ “ಸೈರಾ ನರಸಿಂಹರೆಡ್ಡಿ” ಸಿನಿಮಾವನ್ನು ವೀಕ್ಷಿಸಿದ 7 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಬೇರೆ ಬೇರೆ ಪೊಲೀಸ್ ಠಾಣೆಗೆ ಸೇರಿದ ಈ 7 ಮಂದಿ ಪೊಲೀಸರು ನಿನ್ನೆ ಕೊಯಿಲ್ಕುಂಟ್ಲಾದ ಚಿತ್ರಮಂದಿರದಲ್ಲಿ ಸಿನಿಮಾವನ್ನು ವೀಕ್ಷಿಸಿದ್ದಾರೆ. ಈ ವೇಳೆ ಅವರಲ್ಲಿ ಒಬ್ಬರು ಸಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಇದನ್ನು ಗಮನಿಸಿದ ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ಕೆ. ಫಕೀರಪ್ಪ ಅವರು ಕೂಡಲೇ ಆ 7 ಮಂದಿ ಪೊಲೀಸರ ಬಗ್ಗೆ ತನಿಖೆ ನಡೆಸುವಂತೆ ತಿಳಿಸಿದ್ದಾರೆ. ಈ ವೇಳೆ ಅವರು ಬೇರೆ ಬೇರೆ ಪೊಲೀಸ್ ಠಾಣೆಗೆ ಸೇರಿದ ಪೊಲೀಸರು ಎಂದು ತಿಳಿದು ಬಂದಿದ್ದು, ವಿವಿಧ ಜಿಲ್ಲೆಗಳಿಂದ ಸಿನಿಮಾವನ್ನು ವೀಕ್ಷಿಸಲು ಬಂದಿದ್ದರು. ಅಲ್ಲದೇ ಕರ್ತವ್ಯಕ್ಕೆ ರಜೆಯನ್ನು ಹಾಕದೆ ಕರ್ತವ್ಯವನ್ನು ಮರೆತು ಸಿನಿಮಾ ವೀಕ್ಷಿಸಿದ್ದು, ಇದರಿಂದ ಕೋಪಗೊಂಡ ಪೊಲೀಸ್ ವರಿಷ್ಠಾಧಿಕಾರಿ 7 ಮಂದಿ ಪೊಲೀಸರನ್ನು ಅಮಾನತುಗೊಳಿಸಿದ್ದಾರೆ.










