ಹಾಸನ: ಹೆಣ್ಮಕ್ಳು ಹುಟ್ಟಿದ್ದೇ ತಪ್ಪಾಯ್ತಂತೆ, ಕೆಜಿಎಫ್ ಸಿನಿಮಾ ಸ್ಟೈಲಲ್ಲಿ ಮಗಳಿಗೇ ಸುತ್ತಿಗೆಯಿಂದ ಹೊಡೆದ ಅಪ್ಪ: ವಿಡಿಯೋ ವೈರಲ್

739

ಹಾಸನ: ಕುಡಿದ ಅಮಲಿನಲ್ಲಿ ತಂದೆಯೇ ಮಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಸಕಲೇಶಪುರ ಪಟ್ಟಣದ ಚಂಪಕ ನಗರ ಬಡಾವಣೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಂದೆ ಮಗಳ ಮೇಲೆ ಹಲ್ಲೆ ಮಾಡಿರುವ ವೀಡಿಯೋ ಈಗಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಂದೆ ಪ್ರಶಾಂತ ಎಂಬುವವನು ತನ್ನ ಮಗಳ ಮೇಲೆ ಸುತ್ತಿಗೆಯಿಂದ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾನೆ. ಕಾಫಿ ತೋಟದ ಮಾಲೀಕನಾಗಿರುವ ಇವರು ಎರಡು ಹೆಣ್ಣುಮಕ್ಕಳು ಹುಟ್ಟಿದ್ದೇ ತಪ್ಪು ಎಂದು ಪ್ರತಿನಿತ್ಯ ಕುಡಿದು ಮನೆಗೆ ಬಂದು ಮಕ್ಕಳ ಮೇಲೆ ಅಷ್ಟೇ ಅಲ್ಲದೆ, ಹೆಂಡತಿಯೊಂದಿಗೂ ಗಲಾಟೆ ಮಾಡಿ ಪ್ರತಿನಿತ್ಯ ಕಿರುಕುಳ ನೀಡುತ್ತಾರೆ ಎಂದು ಮನೆಯವರು ಆರೋಪಿಸುತ್ತಿದ್ದಾರೆ.
ಇನ್ನೂ ಮೊನ್ನೆ ಕೂಡ ಕುಡಿದು ಸುತ್ತಿಗೆಯನ್ನು ಕೈಯ್ಯಲ್ಲಿ ಹಿಡಿದು ಹೆಂಡತಿ ಮತ್ತು ಮಕ್ಕಳಿಗೆ ಅವಾಜ್ ಹಾಕಿದ್ದಾರೆ. ಕೆಜಿಎಫ್ ನೋಡಿದ್ದೀರಾ ? ಒಂದೇ ಏಟು. ಮಯೂರ ನಾನು. ನಾನಿರುವುದೇ ನಿಮಗಾಗಿ ಅಂತ ತನ್ನ ಕೈಯಲ್ಲಿದ್ದ ಸುತ್ತಿಗೆಯನ್ನು ಹಿಡಿದು ಹಲ್ಲೆ ಮಾಡಲು ಮುಂದಾಗಿದ್ದಾರೆ. ಮಗಳು ಅಪ್ಪ ನನ್ನ ಸಾಯಿಸುತ್ತೀಯಾ?, ಬಾ ಸಾಯಿಸು ಎನ್ನುತ್ತಿದ್ದಂತೆ ಕೈಯಲ್ಲಿದ್ದ ಸುತ್ತಿಗೆಯಿಂದ ಮಗಳ ಕೈಮೇಲೆ ಹೊಡೆದಿದ್ದಾರೆ. ಈ ವೇಳೆ ಪಕ್ಕದಲ್ಲಿದ್ದ ಪತ್ನಿ ಸುತ್ತಿಗೆಯನ್ನ ಕಿತ್ತುಕೊಂಡು ಅವರನ್ನು ಹೊರಗಟ್ಟಿದ್ದರು. ಅಪ್ಪನ ಈ ಕೃತ್ಯವನ್ನು ಸೆರೆಹಿಡಿದ ಇನ್ನೊಬ್ಬ ಮಗಳು ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದು, ಇವರ ಈ ರ‍್ತನೆಗೆ ನೆಟ್ಟಿಗರು ಕೂಡ ಹಿಡಿಶಾಪ ಹಾಕುತ್ತಿದ್ದು, ಈ ಸಂಬಂಧ ಕನ್ನಡಪರ ಸಂಘಟನೆಗಳು ಪ್ರಶಾಂತ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.