3 ಲಕ್ಷ ಹಣಕ್ಕಾಗಿ 7ವರ್ಷದ ಬಾಲಕನನ್ನು ಅಪಹರಿಸಿದ 10ನೇ ತರಗತಿ ವಿದ್ಯಾರ್ಥಿ…

326
firstsuddi

ಹೈದರಾಬಾದ್ : ಮೂರು ಲಕ್ಷ ರೂ ಹಣಕ್ಕಾಗಿ ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ 7ವರ್ಷದ ಬಾಲಕನನ್ನು ಅಪಹರಣ ಮಾಡಿರುವ ಘಟನೆ ಹೈದರಾಬಾದ್‍ನ ಮೀರ್ ಪೇಟ್‍ನಲ್ಲಿ ನಡೆದಿದ್ದು, ದೂರು ದಾಖಲಾದ 4ಗಂಟೆಯೊಳಗೆ ಪೊಲೀಸರು ಬಾಲಕನನ್ನು ರಕ್ಷಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಿ.ಎಸ್. ಆರ್ ಕಾಲೋನಿ ನಿವಾಸಿ ಅರ್ಜುನ್ ಎಂಬ ಬಾಲಕ ಭಾನುವಾದ ಮಧ್ಯಾಹ್ನದ ವೇಳೆ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದನು. ಇದನ್ನು ಗಮನಿಸಿದ 10ನೇ ತರಗತಿ ವಿದ್ಯಾರ್ಥಿ ಅರ್ಜುನ್ ಬಳಿ ಬಂದು ಸ್ನೇಹದಿಂದ ಮಾತನಾಡಿಸಿ ತನ್ನ ನಿವಾಸದ ಬಳಿ ಕರೆದೊಯ್ದು ಅಲ್ಲಿಂದ ಅಪಹರಣ ಮಾಡಿದ್ದು, ಬಳಿಕ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಅರ್ಜುನ್ ಅವರ ತಂದೆಗೆ ಕರೆ ಮಾಡಿ 3ಲಕ್ಷ ರೂ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ ಪೊಲೀಸರಿಗೆ ಮಾಹಿತಿ ತಿಳಿಸಿದರೆ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ಮಗ ಕಾಣೆಯಾಗಿದ್ದರಿಂದ ಭಯಭೀತರಾಗಿದ್ದ ತಂದೆ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ರಾಜಕೊಂಡ ಪೊಲೀಸರು ದೂರು ದಾಖಲಿಸಿಕೊಂಡ 4ಗಂಟೆಯೊಳಗೆ ಬಾಲಕನನ್ನು ರಕ್ಷಿಸಿ ಆರೋಪಿ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.