ಬೆಳಗಾವಿ : ಉಪಚುನಾವಣೆಯ ಫಲಿತಾಂಶದ ಬಳಿಕ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಈಗಾಗಲೇ ಬಿಜೆಪಿ-ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಂಕಷ್ಠ ಅನುಭವಿಸಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಹೇಳಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಹೇಗೆ ಪತನವಾಯಿತು ಎಂಬುವುದು ನನಗೆ ಗೊತ್ತಿದೆ. ನಾವು ಯಾರೊಂದಿಗೂ ಸೇರುವುದಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಾಗದಿದ್ದರೆ ಸರ್ಕಾರ ಹೇಗೆ ಪತನವಾಗುತ್ತದೆ. ಬಿಜೆಪಿಯವರ ಬಳಿ 105 ಸ್ಥಾನ ಇದೆ. ನಾವು ಬಿಜೆಪಿ ಹಾಗೂ ಕಾಂಗ್ರೆಸ್ ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲೇ ಕುಳಿತುಕೊಳ್ಳುತ್ತೇವೆ. ಈಗಾಗಲೇ ಬಿಜೆಪಿ-ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಾಕಾಗಿದೆ ಎಂದರು. ಇದೇ ವೇಳೆ ಮಹಾರಾಷ್ಟ್ರ ರಾಜಕೀಯದ ಬಗ್ಗೆ ಪ್ರತಿಕ್ರಯಿಸಿದ ಅವರು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಎನ್ಸಿಪಿ ಮತ್ತು ಶಿವಸೇನೆ ಮೈತ್ರಿಯಾಗಿ ಸರ್ಕಾರ ರಚನೆ ಮಾಡಿರುವುದು ಹೊಸ ಪ್ರಯೋಗ. ಐದು ವರ್ಷ ಮೈತ್ರಿ ಸರ್ಕಾರ ಸುಭದ್ರವಾಗಿ ನಡೆಯುತ್ತದೆಯೋ ಎಂಬುವುದನ್ನು ಕಾದು ನೋಡಬೇಕಿದೆ ಎಂದರು.










