ಮೂಡಿಗೆರೆ : ಉಪಚುನಾವಣೆ ಫಲಿತಾಂಶದ ಬೆನ್ನಲ್ಲೇ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಭಿ ಹಾಗೂ ಅವರ ಪಟ್ಟಿ ದೊಡ್ಡದಿರುವಂತೆ ಕಾಣುತ್ತಿದ್ದು, ಮೂಡಿಗೆರೆ ಶಾಸಕರಾದ ಎಂ.ಪಿ ಕುಮಾರಸ್ವಾಮಿ ಅವರು ಫಲಿತಾಂಶದ ಬೆನ್ನಲ್ಲೇ ನಾನೂ ಕೂಡಾ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದು, ಇನ್ನೂ ಎರಡು ಮೂರು ದಿನಗಳಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ ದೊಡ್ಡದು ಆಗುವುದರಲ್ಲಿ ಸಂದೇಹವಿಲ್ಲ ಅನ್ನಿಸುತ್ತೆ. ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಇವರು, ನಾನು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದ್ದೇನೆ. ಈ ಫಲಿತಾಂಶ ಅಚ್ಚರಿ ಏನಿಲ್ಲ. 15 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದುಕೊಂಡಿದ್ದೆವು. ಸಣ್ಣ ಪುಟ್ಟ ವ್ಯತ್ಯಾಸಗಳಿಂದ 2 ಸ್ಥಾನ ಕಳೆದುಕೊಂಡಿದ್ದೇವೆ. ಈ ಫಲಿತಾಂಶ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೂ ಗೊತ್ತಿತ್ತು ಎಂದಿದ್ದಾರೆ. ಮುಂದುವರೆದು ಮಾತನಾಡಿದ ಇವರು, ಈ ಬಾರಿ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ನಿನ್ನೆ ನನ್ನ ಕೆಲವು ಸ್ನೇಹಿತರು ನಾನು ಯಡಿಯೂರಪ್ಪನವರ ಮಾನಸ ಪುತ್ರ ಎಂದಿದ್ದಾರೆ. ಆದರೆ ಅವರು ಬಸವಣ್ಣನ ಅನುಯಾಯಿಗಳು ಯಡಿಯೂರಪ್ಪನವರ ನಿಜವಾದ ಮಾನಸ ಪುತ್ರ ಅಂದರೆ ಅದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ. ನಾನೆಂದು ಅವರ ಮಾತನ್ನು ಮೀರಿಲ್ಲ. ಅವರು ಹಾಕಿದ ಗೆರೆಯನ್ನು ದಾಟಿಲ್ಲ. ಅವರ ಮನಸ್ಸಿನಲ್ಲಿ ನಾನಿದ್ದೇನೆ ನನ್ನನ್ನು ಮಂತ್ರಿ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಜನ್ನಾಪುರ ರಘು, ಬಿಜೆಪಿ ಮುಖಂಡರಾದ ಶಿವೇಗೌಡರು, ಹಾಲೂರು ಪಂಚಾಕ್ಷರಿ, ಹಳೇಕೋಟೆ ವಿನಯ್, ಬಿಜೆಪಿ ಯುವ ಮುಖಂಡರಾದ ಪರೀಕ್ಷಿತ್ ಜಾವಳಿ, ಆದರ್ಶ್ ತರುವೆ ಸೇರಿದಂತೆ ಇತರರು ಇದ್ದರು.









