ಚಿಕ್ಕಮಗಳೂರು : ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮರೆಯಬಾರದು ಎಂದು ಸಚಿವ ಸಿ.ಟಿ.ರವಿ ಅವರ ಪತ್ನಿ ಪಲ್ಲವಿ ರವಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಕನ್ನಡ ಜಾನಪದ ಪರಿಷತ್, ತಾಲ್ಲೂಕು ಮತ್ತು ಹೋಬಳಿ ಘಟಕಗಳ ಆಶ್ರಯದಲ್ಲಿ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಸುಗ್ಗಿ ಹಬ್ಬದಲ್ಲಿ ಜಾನಪದ ಸಂಭ್ರಮ ಮಾಸಾಚರಣೆಗೆ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರೌಢಶಾಲೆಯಲ್ಲಿ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕೆಲವು ವರ್ಷಗಳ ಹಿಂದೆ ನಗರ, ಪಟ್ಟಣ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲಿ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಜನಜೀವನದ ಹಾಸುಹೊಕ್ಕಾಗಿತ್ತು, ಆಧುನಿಕತೆಗೆ ನಮ್ಮನ್ನು ತೆರೆದುಕೊಂಡ ನಂತರ ಕಂಪ್ಯೂಟರ್, ಟಿ.ವಿ ಮತ್ತು ಮೊಬೈಲ್‍ಗಳ ಭರಾಟೆಯಲ್ಲಿ ಅವು ಜನಮಾನಸದಿಂದ ದೂರಾಗುತ್ತಿವೆ ಎಂದು ವಿಷಾದಿಸಿದರು.
ಸುಗ್ಗಿ ಹಬ್ಬದ ಸಂಪ್ರದಾಯ, ಸಂಸ್ಕೃತಿ, ಕಟ್ಟುಪಾಡು ಮತ್ತು ಆಚರಣೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದ ಅವರು ಬದಲಾದ ಇಂದಿನ ಸನ್ನಿವೇಶದಲ್ಲಿ ಕಂಪ್ಯೂಟರ್, ಟಿ.ವಿ ಮತ್ತು ಮೊಬೈಲ್ ಅನಿವಾರ್ಯವಾಗಿರುವುದರಿಂದ ಅವುಗಳನ್ನು ಬಳಸಿ ಆದರೆ ಅದರ ಜೊತೆ ಜೊತೆಗೆ ನಮ್ಮ ಕಲೆ, ಸಂಸ್ಕಾರ ಮತ್ತು ಸಂಸ್ಕೃತಿಯನ್ನೂ ಬೆಳೆಸಿ ಎಂದು ಮನವಿ ಮಾಡಿದರು.
ಜಾನಪದ ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದ ಸುಗಮ ಸಂಗೀತ ಗಂಗಾದ ಅಧ್ಯಕ್ಷ ಎಸ್.ಎಸ್.ವೆಂಕಟೇಶ್ ಜಾನಪದ ನಮ್ಮ ಹಿರಿಯರ ಜೀವನಾನುಭವದ ಸಾಹಿತ್ಯ, ತಮ್ಮ ಅನುಭವಗಳನ್ನು ನೋವು, ನಲಿವುಗಳನ್ನು ಅವರು ಹಾಡುಗಳಲ್ಲಿ ಕಟ್ಟಿಕೊಟ್ಟಿದ್ದಾರೆ, ಅವುಗಳನ್ನು ಇಂದಿನ ವಿದ್ಯಾರ್ಥಿಗಳು ಮೈಗೂಡಿಸಿ ಕೊಳ್ಳಬೇಕು ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ಆಧುನಿಕತೆಯ ನಾಗಾಲೋಟದಲ್ಲಿ ಕಣ್ಮರೆಯಾಗುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಆ ಮೂಲಕ ಅವುಗಳನ್ನು ಮುಂದಿನ ತಲೆಮಾರಿಗೆ ಉಳಿಸುವ ಉದ್ದೇಶದಿಂದ ಸುಗ್ಗಿ ಹಬ್ಬದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಇಡೀ ತಿಂಗಳು ನಡೆಸಲಾಗುವುದು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಸಿದ್ದಪ್ಪ ಟಿ.ಟಕ್ಕಳಿಕೆ ಅಧ್ಯಕ್ಷತೆ ವಹಿಸಿದ್ದರು, ತಾಲ್ಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಆರ್.ಜಗದೀಶ್, ಜಿಲ್ಲಾ ಕಾರ್ಯದರ್ಶಿ ಎ.ಆರ್.ಪ್ರಕಾಶ್, ಶಿಕ್ಷಕರಾದ ಹೆಚ್.ಎಂ.ಓಂಕಾರಪ್ಪ, ಧರ್ಮೇಗೌಡ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮರೆಯಬಾರದು : ಪಲ್ಲವಿ...










