ಮೂಡಿಗೆರೆ : ಸಿಎಎ, ಎನ್.ಆರ್.ಸಿ ಕಾಯ್ದೆ ವಿರುದ್ಧ ಮಸೀದಿಯ ಆವರಣದಲ್ಲಿ ಪ್ರತಿಭಟನೆ…

596
firstsuddi

ಮೂಡಿಗೆರೆ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೊಂದಾಣಿ ಕಾಯ್ದೆ ವಿರೋಧಿಸಿ ಬಿಳಗುಳದ ನೂರುಲ್ ಹುದಾ ಜುಮ್ಮಾ ಮಸೀದಿಯ ಆವರಣದಲ್ಲಿ ಇಂದಿನ ನಮಾಜ್ ಮುಗಿಸಿ ನೂರಾರು ಮುಸಲ್ಮಾನರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಸ್ಜಿದ್ ನ ಖತೀಬರಾದ ಸಿನಾನ್ ಫೈಝಿ ಅವರು, ಈ ದೇಶದಲ್ಲಿಯೇ ಹುಟ್ಟಿ ಬೆಳೆದಿರುವ ಪ್ರತಿಯೊಬ್ಬ ಸಾರ್ವಜನಿಕರು ಕೇಂದ್ರ ಸರ್ಕಾರ ಜಾರಿ ಮಾಡಿರುವ ಕರಾಳ ಕಾನೂನಿನ ವಿರುದ್ಧ ನಿಲ್ಲಬೇಕಿದೆ. ಹಾಗೂ ಯಾರಿಗೂ ಯಾವುದೇ ದಾಖಲೆಗಳನ್ನು ತೋರಿಸುವ ಅಗತ್ಯವಿಲ್ಲ. ಈಗಾಗಲೇ ದೇಶಾಧ್ಯಂತ ಈ ಕಾನೂನಿನ ವಿರುದ್ಧ ಎಲ್ಲಾ ಧರ್ಮದ ಪ್ರಜ್ಞಾವಂತರು ಪ್ರತಿಭಟಿಸಿದ್ದಾರೆ. ಈ ಕಾನೂನು ರದ್ದಾಗುವವರೆಗೂ ದೇಶದ ಮೂಲೆ ಮೂಲೆಯಲ್ಲೂ ಪ್ರತಿಭಟನೆಗಳು ನಡೆಯುತ್ತವೆ ಎಂದರು. ಪ್ರತಿಭಟನೆಯಲ್ಲಿ ಜುಮ್ಮಾ ಮಸ್ಜಿದ್ ನ ಅಧ್ಯಕ್ಷ ಅನೀಫ್ ಆಜಿ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ.ಎಸ್ ಲತೀಫ್, ಮೊಹಿದ್ದೀನ್, ಜಮಾಹತ ಕಮಿಟಿ ಸದಸ್ಯರಾದ ಎಂ.ಎ ಅಹಮ್ಮದ್, ಜುಬೇರ್, ಸಮಾಜ ಸೇವಕರಾದ ಅಬ್ದುಲ್ ರೆಹಮಾನ್, ಕಾಂಗ್ರೆಸ್ ಮುಖಂಡರಾದ ಅಹಮ್ಮದ್ ಬಾವು, ಜೆಡಿಎಸ್ ಮುಖಂಡರಾದ ನಾಸೀರ್, ಯೂತ್ ಕಮಿಟಿ ಅಧ್ಯಕ್ಷ ಮೊಹಿದ್ದೀನ್ ಹಾಗೂ ಸಂಶುದ್ದೀನ್ ಸೇರಿದಂತೆ ಇತರರು ಭಾಗಿಯಾದರು.