ವರದಿ: ಸುಧೀರ್.ಬಿ.ಟಿ.ಮೂಡಿಗೆರೆ
ಮೂಡಿಗೆರೆ : ತಾಲ್ಲೂಕಿನ 10 ಕಿ.ಮೀಗಳ ದೂರದಲ್ಲಿರುವ ಪುರಾತನ ಗೋಣಿಬೀಡು ಅಗ್ರಹಾರದ ಆದಿ ಸುಬ್ರಹ್ಮಣ್ಯ ಕ್ಷೇತ್ರ ಬಹಳ ಪ್ರಸಿದ್ದಿಯಾದ ಸ್ಥಳವಾಗಿದ್ದು, ಜನವರಿ28 ರಿಂದ ಫೆಬ್ರವರಿ2 ರವರೆಗೆ ಜಾತ್ರೆ ನಡೆಯಲಿದೆ. ಮಾಘ ಶುದ್ದ ಷಷ್ಠಿಯ ದಿನವಾದ ಜನವರಿ 31ರಂದು ಬ್ರಹ್ಮರಥೋತ್ಸವ ನಡೆಯಲಿದೆ.
ಗೋಣಿಬೀಡು ಜಿ.ಅಗ್ರಹಾರದ ಶ್ರಿ ಆದಿಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವದ ನಂತರ ಇಲ್ಲಿಯ ಪ್ರಸಾದವನ್ನು ತೆಗೆದುಕೊಂಡು ಕುಕ್ಕೇ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಿಸಿ ನಂತರ ಅಲ್ಲಿಯ ರಥೋತ್ಸವವನ್ನು ನಡೆಸಲಾಗುತ್ತಿತ್ತೆಂದು ಎನ್ನುವುದು ಹಲವು ಹಿರಿಯರ ವಾದವಾಗಿದೆ. ಮಾರ್ಗಶಿರ ಶುದ್ಧ ಷಷ್ಠಿಯನ್ನು ಸುಬ್ರಹ್ಮಣ್ಯ ಷಷ್ಠಿ ಎಂದು ಕರೆಯಲಾಗುತ್ತದೆ ಹಾಗೂ ಆ ದಿನದಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರಥೋತ್ಸವ ನಡೆಯುತ್ತದೆ. ಮಾಘ ಶುದ್ದ ಷಷ್ಠಿಯನ್ನು ತುಳುವ ಷಷ್ಠಿ ಎಂದು ಕರೆಯಲಾಗುತ್ತದೆ ಮತ್ತು ಅಂದು ಘಾಟಿ ಸುಬ್ರಹ್ಮಣ್ಯದಲ್ಲಿ ರಥೋತ್ಸವ ನಡೆಯುತ್ತದೆ. ಮಾಘ ಶುದ್ದ ಷಷ್ಠಿಯನ್ನು ಕುಮಾರ ಷಷ್ಠಿ ಎಂದು ಕರೆಯಲಾಗುತ್ತದೆ ಹಾಗೂ ಆ ದಿನದಂದು ಶ್ರೀ ಆದಿ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವ ನಡೆಸಲಾಗುತ್ತದೆ. ಇಲ್ಲಿನ ವಿಶೇಷವೆಂದರೆ ದೇವರ ರಥರೋಹಣ ಸಮಯದಲ್ಲಿ ಗರುಡ ಪಕ್ಷಿಯು ಆಗಸದಲ್ಲಿ ರಥದ ಮೇಲ್ಬಾಗದಲ್ಲಿ ಮೂರು ಸುತ್ತುಹೊಡೆದ ನಂತರ ರಥವನ್ನು ಎಳೆಯಲಾಗುತ್ತದೆ.
ಇತಿಹಾಸ :- 1800 ಹದಿಮೂರನೆಯ ಶತಮಾನದಲ್ಲಿ ವಿಜಯ ನಗರ ಸಾಮ್ರಾಜ್ಯದ ಅರಸರುಗಳಾದ ಹರಿಹರ, ಹಕ್ಕ ಬುಕ್ಕರು ತಮ್ಮ ಸಾಮ್ರಾಜ್ಯ ವಿಸ್ತರಣೆಯ ಸಮಯದಲ್ಲಿ ಉಂಟಾದ ಜೈನ ಮತ್ತು ವೈಷ್ಣವರ ಮದ್ಯೆ ಧಾರ್ಮಿಕ ಕಲಹವನ್ನು ಬಗೆಹರಿಸಲು ಮತ್ತು ಸರ್ವ ಧರ್ಮ ಸಮನ್ವಯ ನೀತಿಯನ್ನು ಜನರಿಗೆ ಬೋಧಿಸುವ ಸಲುವಾಗಿ ವ್ಯಾಪಕ ಯಾತ್ರೆಯನ್ನು ಕೈಗೊಂಡಿದ್ದರು. ಯಾತ್ರೆ ಹೊರಟ ಹರಿಹರ ಮಹಾರಾಜನು ಮಲೆನಾಡಿನ ಅನೇಕ ಅರಣ್ಯ ಪ್ರದೇಶಗಳನ್ನು ಸುತ್ತಾಡಿ ದಣಿವಾಗಿ ಇಲ್ಲಿಯ ಹೇಮಾವತಿ ನದಿ ದಂಡೆ ಯಲ್ಲಿ ನಿದ್ರೆಗೆ ಶರಣಾದನು.
ನಿದ್ರೆಯಲ್ಲಿದ್ದ ರಾಜನಿಗೆ ವೃದ್ಧ ಬ್ರಾಹ್ಮಣನು ಕಾಣಿಸಿಕೊಂಡು – ನೀನು ತಂಗಿರುವ ಈ ಸ್ಥಳ ಸಾಮಾನ್ಯವಾದುದಲ್ಲ. ಇಲ್ಲಿ ಈಶ್ವರನ ಮಗನಾದ ಸುಬ್ರಹ್ಮಣ್ಯನು ಘೋಣಾಸುರನೆಂಬ ರಾಕ್ಷಸನನ್ನು ಸಂಹರಿಸಿದ ಪವಿತ್ರ ಸ್ಥಳವಿದು. ಘೋಣಾಸುರನು ತನಗೆ ಮನುಷ್ಯರಿಂದ ಮತ್ತು ಪ್ರಾಣಿಗಳಿಂದ ಸಾವು ಬಾರದಂತೆ ವರವನ್ನು ಪಡೆದುಕೊಂಡಿದ್ದನ್ನು ಆದರೆ ಹಾವಿನ ಬಗ್ಗೆ ಪ್ರಸ್ತಾಪಿಸಿರುವುದಿಲ್ಲ. ಆದ್ದರಿಂದ ಸುಬ್ರಹ್ಮಣ್ಯನು ಅವತಾರದಲ್ಲಿ ಉರುಗನಾಗಿ ಘೋಣಾಸುರನನ್ನು ಸಂಹರಿಸಿದ ಎಂದು ತಿಳಿಸುತ್ತ. ಈ ಪ್ರಶಾಂತ ಹಾಗೂ ಪವಿತ್ರ ಸ್ಥಳದಲ್ಲಿ ಬೆಳಿಗ್ಗೆ ಸ್ನಾನ ಮಾಡುವಾಗ ಒಂದು ವಿಗ್ರಹ ದೊರೆ ಯಲಿದೆ ಅದನ್ನು ಇದೇ ಸ್ಥಳ ಅಂದರೆ ಹೇಮಾವತಿ ನದಿ ದಂಡೆಯ ಮೇಲೆ ಪ್ರತಿಷ್ಠಾಪಿಸಿ ಒಂದು ದೇವಾಲಯವನ್ನು ನಿರ್ಮಿಸುವಂತೆ ತಿಳಿಸಿ ಅದೃಶ್ಯನಾಗುತ್ತಾನೆ.
ರಾಜನು ಸ್ನಾನಕ್ಕೆಂದು ಹೇಮಾವತಿ ನದಿಯಲ್ಲಿ ಇಳಿದಾಗ ಏಳು ಹೆಡೆಯ ಸರ್ಪದ ವಿಗ್ರಹವು ದೊರೆಯುತ್ತದೆ. ತಾನು ಕಂಡ ಕನಸು ನನಸಾಗಿದ್ದನ್ನು ತಿಳಿದು ಅಚ್ಚರಿ ಪಡುವುದರ ಮೂಲಕ ಸ್ಥಳದ ಮಹಿಮೆಯನ್ನು ಅರಿತ ಹರಿಹರ ಮಹಾರಾಜನು ಪುರೋಹಿತರನ್ನು ಕರೆಯಿಸಿ ಶಾಸ್ತ್ರೋಕ್ತವಾಗಿ ಏಳುಹೆಡೆಯ ನಾಗರಾಜನ ವಿಗ್ರಹವನ್ನು ಪ್ರತಿಷ್ಠಾಪಿಸಿ ದೇವಾಲಯವನ್ನು ಕಟ್ಟಿಸಿದನು ಎಂಬುವುದು ಇಲ್ಲಿಯವರ ನಂಬಿಕೆ. ಇಲ್ಲಿನ ದೇವಾಲಯವು ಕ್ರಿ.ಶ.1441 ನೇ ಮಾಘ ಶುದ್ದ ಷಷ್ಠಿಯಂದು ಪ್ರಾರಂಭವಾಯಿತೆಂದು `ಮಧುರಾ ವಿಜಯಂ` ಎಂಬ ಸಂಸ್ಕøತ ಕೃತಿಯಲ್ಲಿದೆ ಹಾಗೂ ವಿಗ್ರಹವು ಆದಿ ಶೇಷನ ರೂಪದಲ್ಲಿರುವುದರಿಂದ ಶ್ರೀ ಆದಿಸುಬ್ರಹ್ಮಣ್ಯ ಎಂದು ಕರೆಯಲಾಗುತ್ತಿದೆ.
ಕಾಲಾನಂತರ ದೇವಾಲಯವು ಸೂಕ್ತ ನಿರ್ವಹಣೆಯ ಕೊರತೆಯಿಂದ ಹಾನಿಗೊಂಡರೂ ಸ್ಥಳೀಯರಿಂದ ಪೂಜೆ ಪುರಸ್ಕಾರಗಳೂ ನಡೆಯುತ್ತಿದ್ದವು. ಆನಂತರ ಹೊಯ್ಸಳರ ಕಾಲದಲ್ಲಿ ಪುನ:ಶ್ಚೇತನಗೊಂಡಿತು ಎನ್ನಲಾಗಿದೆ. ಇದರ ಕುರುಹಾಗಿ ್ಲ ಹೊಯ್ಸಳರ ಶೈಲಿಯ ಶಿಲ್ಪದಲ್ಲಿರುವ ನಾಗಲಾಂಬಿಕೆ (ಪಾರ್ವತಮ್ಮ) ದೇವರನ್ನು ಇಂದಿಗೂ ಈ ದೇವಸ್ಥಾನದಲ್ಲಿ ನಾವು ಕಾಣಬಹುದಾಗಿದೆ. ಕಂಬದಲ್ಲಿ ಉದ್ಭವಿಸಿರುವ ಕಂಬದ ಗಣಪತಿಯು ಈ ದೇವಾಲಯದ ವಿಶೇಷ ಆಕರ್ಷಣೆಯಾಗಿದೆ. ಮೈಯಲ್ಲಿ ಕಜ್ಜಿ ಕಾಣಿಸಿಕೊಂಡರೆ ಹರಕೆ ಹೊತ್ತರೆ ಕಜ್ಜಿಯು ಮಾಯವಾಗುತ್ತದೆ ಎಂಬ ನಂಬಿಕೆಯಿಂದ ರಥೋತ್ಸವದ ಸಮಯದಲ್ಲಿ ಹರಕೆ ಹೊತ್ತ ಭಕ್ತರು ದೇವಾಲಯದಲ್ಲಿ ದೊರೆಯುವ ಬೆಳ್ಳಿ ನಾಗ ಹಾಗೂ ಕಜ್ಜಿ ತುರಿಕೆಯ ಅಚ್ಚುಗಳನ್ನು ದೇವರಿಗೆ ಅರ್ಪಿಸಿ ಬೇಡಿಕೊಳ್ಳುವುದು ಇಲ್ಲಿನ ಸ್ಥಳ ಮಹಿಮೆಯಾಗಿದೆ.
ಸದ್ಯ ಕರ್ನಾಟಕದ ಮುಜರಾಯಿ ಇಲಾಖೆಯ ಸುಪರ್ದಿಯಲ್ಲಿರುವ ಇಲ್ಲಿನ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು, ಮುಂಬರುವ ಜಾತ್ರಾ ಮಹೋತ್ಸವಕ್ಕೆ ಸ್ಥಳೀಯರು ಆತುರದಿಂದ ಎದುರು ನೋಡುತ್ತಿದ್ದಾರೆ. ಜಾತ್ರೆಯು ಜನವರಿ28 ರಿಂದ ಫೆಬ್ರವರಿ2 ರವರೆಗೆ ನಡೆಯಲಿದ್ದು. ಷಷ್ಠಿಯ ದಿನವಾದ 31 ರ ಭಾನುವಾರದಂದು ಶ್ರೀ ಅದಿಸುಬ್ರಹ್ಮಣ್ಯೇಶ್ವರ ಸ್ವಾಮಿಯ ದಿವ್ಯ ರಥೋತ್ಸವವು ನಡೆಯಲಿದೆ. ಅಂದು ಸ್ಥಳೀಯರು ಸೇರಿದಂತೆ, ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಈ ರಥೋತ್ಸವದಲ್ಲಿ ಪಾಲ್ಗೊಂಡು ಪುನಿತರಾಗುತ್ತಾರೆ










