ಮೂಡಿಗೆರೆ : ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಲೆನಾಡಿನ ಪ್ರಾಂತ್ಯದಲ್ಲಿ ಗುಡ್ಡ ಕುಸಿತ, ಬೆಳೆ ಹಾನಿ ಸೇರಿದಂತೆ ಹಲವು ತೊಂದರೆಗಳಿಗೆ ಮಲೆನಾಡಿಗರು ಈಡಾಗಿದ್ದು, ಚಾರ್ಮಾಡಿ ಘಾಟ್‍ನಲ್ಲೂ ಹಲವು ಕಡೆ ಗುಡ್ಡ ಕುಸಿತ ಹಾಗೂ ರಸ್ತೆ ಕುಸಿತವಾಗಿದ್ದು, ಈಗಾ ರಸ್ತೆ ದುರಸ್ಥಿ ಕಾರ್ಯ ಮುಗಿದಿದ್ದು, ಲಘು ವಾಹನ ಹಾಗೂ ಮಿನಿ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದ್ದು, ಮೂಡಿಗೆರೆ ಮಾರ್ಗವಾಗಿ ಧರ್ಮಸ್ಥಳ, ಮಂಗಳೂರು ಭಾಗಗಳಿಗೆ ತೆರಳಲು ಪ್ರಮುಖ ದಾರಿಯಾಗಿರುವ ಚಾರ್ಮಾಡಿ ಘಾಟ್ ಮಧ್ಯೆ ಸಿಗುವ ಜೇನುಕಲ್ ದೇವಸ್ಥಾನವು ಹಲವಾರು ದಶಕಗಳಿಂದಲೂ ಹೆಸರುವಾಸಿಯಾಗಿದ್ದು, ಈ ದಾರಿಯಲ್ಲಿ ಪ್ರಯಾಣ ಮಾಡುವ ಯಾವುದೇ ಪ್ರಯಾಣಿಕನೂ ಕೂಡ ಇಲ್ಲಿರುವ ಗಣಪತಿ ಹಾಗೂ ಅಣ್ಣಪ್ಪ ಸ್ವಾಮಿಗೆ ಪೂಜೆ ಸಲ್ಲಿಸದೆ ತಮ್ಮ ಪ್ರಯಾಣವನ್ನು ಮುಂದುವೆರೆಸುವುದಿಲ್ಲ. ಅಲ್ಲದೆ ದೇವಸ್ಥಾನದ ಸುತ್ತಮುತ್ತಲು ಇರುವ ಪ್ರಕೃತಿಯ ಸೊಬಗು ಕೂಡ ಯಾವುದೇ ಪ್ರಯಾಣಿಕನನ್ನು ಒಂದಷ್ಟು ಕಾಲ ಉಳಿಸಿಕೊಳ್ಳದೆ ಕಳುಹಿಸಲಾರದು. ಪ್ರಕೃತಿಯ ಸೌಂದರ್ಯವನ್ನು ಸವಿಯುವ ಜೊತೆಗೆ ಕುಡಿಯಲು ಪ್ರಕೃತಿದತ್ತವಾಗಿ ಸಿಗುವ ಸಿಹಿನೀರನ್ನು ಬಾಟಲಿಗಳಿಗೆ ತುಂಬಿಸಿಕೊಳ್ಳುವುದು, ಉದರ ಬಾಧೆಗಳನ್ನು ತೀರಿಕೊಳ್ಳುವುದು ಇಲ್ಲಿನ ನಿತ್ಯ ಚಟುವಟಿಕೆ. ದುರದೃಷ್ವವಶಾತ್ ಈ ಬಾರಿಯ ಮಳೆಗೆ ಇಲ್ಲಿರುವ ಶೌಚಾಲಯದ ಮೇಲೆ ಮರವೊಂದು ಬಿದ್ದಿದ್ದು, ಉಪಯೋಗಿಸಲು ಸಾಧ್ಯವಾಗದ ರೀತಿಯಲ್ಲಿ ಜಖಂ ಆಗಿದೆ. ಇದರಿಂದಾಗಿ ಇಲ್ಲಿ ನಿಂತು ಮುಂದಕ್ಕೆ ಸಾಗುವ ಪ್ರಯಾಣಿಕರಿಗೆ ಅದರಲ್ಲೂ ಹೆಂಗಸರು ಮತ್ತು ಮಕ್ಕಳಿಗೆ ತೀವ್ರ ಮಟ್ಟದಲ್ಲಿ ತೊಂದರೆಯಾಗಿದೆ. ಈ ಸಮಸ್ಯೆ ಬಗ್ಗೆ ತಾಲ್ಲೂಕು ಆಡಳಿತ, ಜಿಲ್ಲಾಡಳಿತವಾಗಲೀ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸ್ಥಳೀಯರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರಸ್ಥಾವಿಸಿದ ಬಣಕಲ್‍ನ ನೇಸರ ಜಗದೀಶ್ ಅವರು, ಶೌಚಾಲಯ ವಿಚಾರವಾಗಿ ತಾಲ್ಲೂಕು ಆಡಳಿತ, ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ರಸ್ತೆ ನಿರ್ಮಾಣ, ದೇವಸ್ಥಾನದ ಟೆಂಡರ್ ಪ್ರಕ್ರಿಯೆಗಳಿಗೆ ತಲೆಕೆಡಿಸಿಕೊಂಡಂತೆ ಮೂಲಭೂತ ಸೌಕರ್ಯಗಳ ಬಗ್ಗೆ ಮಾತ್ರ ಯಾವ ಅಧಿಕಾರಿಗಳೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಶೌಚಾಲಯ ಇಲ್ಲದೆ ಇರುವುದರಿಂದ ರಸ್ತೆ ಬದಿ ಹಾಗೂ ದೇವಸ್ಥಾನದ ಅಕ್ಕ ಪಕ್ಕದಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದು, ಮೂಗು ಮುಚ್ಚಿಕೊಂಡು ತಿರುಗಾಡುವಂಥಹ ಪರಿಸ್ಥಿತಿ ಎದುರಾಗಿದೆ. ಒಂದು ನಿಮಿಷ ದೇವರ ಮುಂದೆ ನಿಂತು ಧನ್ಯತಾಭಾವದಿಂದ ಕೈ ಮುಗಿಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗಿರುವುದರ ಹಿಂದೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಪ್ರತೀ ನಿತ್ಯ 5 ಸಾವಿರಕ್ಕೂ ಹೆಚ್ಚು ಕಾಣಿಕೆ ಸಂಗ್ರಹವಾಗುವ ಇಲ್ಲಿನ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮಾತ್ರ ಯಾವುದೇ ಅನುಕೂಲತೆಗಳನ್ನು ಸರ್ಕಾರ ಒದಗಿಸಿಲ್ಲ. ಇನ್ನಾದರೂ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡು ಕೂಡಲೇ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಒತ್ತಾಯಿಸಿದರು.
ಒಂದಿಲ್ಲೊಂದು ದುರಂತಗಳಿಗೆ ನಲುಗಿ ಹೋಗಿರುವ ಚಾರ್ಮಾಡಿ ಘಾಟ್ ಪ್ರವಾಸಿಗರ ಮತ್ತು ಸ್ಥಳೀಯರ ನೆಚ್ಚಿನ ತಾಣವಾಗಿದೆ. ಹಲವು ಮೂಲಭೂತ ಸೌಕರ್ಯಗಳ ಜೊತೆಗೆ ಶೌಚಾಲಯದ ದುರಸ್ಥಿ ಕೂಡ ಅತ್ಯವಶ್ಯವಾಗಿದ್ದು ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ.










