ಮೂಡಿಗೆರೆ : ಕಾನೂನಿನ ದೃಷ್ಟಿಯಲ್ಲಿ ಕಾನೂನಿನ ಅರಿವು ಇಲ್ಲದೆ ಮಾಡಿದ ಅಪರಾಧಕ್ಕೆ ಯಾವುದೇ ಕ್ಷಮೆ ಇರುವುದಿಲ್ಲ : ನ್ಯಾಯಾಧೀಶ ಕೆ.ಎಂ.ಹರೀಶ್.

335
firstsuddi

ಮೂಡಿಗೆರೆ : ತಾಲ್ಲೂಕು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗೆಳ ಸಹಭಾಗಿತ್ವದಲ್ಲಿ ಪಟ್ಟಣದ ಡಿ.ಎಸ್. ಬಿಳೀಗೌಡ ಪ್ರಥಮದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೆ.ಎಂ.ಹರೀಶ್ ಅವರು, ಅಪರಾಧ ಮಾಡಿ ನ್ಯಾಯಾಲಯಕ್ಕೆ ಬಂದ ಕೆಲವು ಆರೋಪಿಗಳಲ್ಲಿ ತಮಗೆ ಕಾನೂನಿನ ಅರಿವು ಇರಲಿಲ್ಲ ಆದುದರಿಂದ ಅಪರಾಧ ಆಗಿದೆ ದಯವಿಟ್ಟು ಕ್ಷಮೆ ನೀಡಬೇಕು ಎಂದು ಮನವಿ ಮಾಡುತ್ತಾರೆ. ಆದರೆ ಕಾನೂನಿನ ದೃಷ್ಟಿಯಲ್ಲಿ ಕಾನೂನಿನ ಅರಿವು ಇಲ್ಲದೆ ಮಾಡಿದ ಅಪರಾಧಕ್ಕೆ ಯಾವುದೇ ಕ್ಷಮೆ ಇರುವುದಿಲ್ಲ. ಆದುದರಿಂದ ಶಿಕ್ಷೆಯಿಂದ ಪಾರಾಗಲು ಸಾಧ್ಯವಿಲ್ಲ. ಇದಕ್ಕೆ ಇರುವುದು ಒಂದೇ ಪರಿಹಾರ. ಅದು ಅಪರಾಧವನ್ನು ಮಾಡದೆ ಇರುವುದು ಮಾತ್ರ. ಇದರ ಜೊತೆಯಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಳ್ಳುವುದರಿಂದ ಅಪರಾಧ ಮಾಡುವ ಮನಸ್ಥಿತಿಯಿಂದ ದೂರ ಇರಲು ಸಾಧ್ಯ. ಪ್ರತಿಯೊಬ್ಬರೂ ಸಹ ಕಾನೂನಿನ ಅರಿವು ಹೊಂದಿರಬೇಕು ಎನ್ನುವ ಉದ್ದೇಶದಿಂದ 15 ವರ್ಷಗಳಿಂದ ಸತತವಾಗಿ ಕಾನೂನು ಅರಿವು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂಥಹ ಕಾರ್ಯಾಗಾರಗಳಿಗೆ ಯುವಕರು ಮತ್ತು ಸಾರ್ವಜನಿಕರು ಭಾಗವಹಿಸಿ ತಮ್ಮ ಕಾನೂನಿನ ಅರಿವು ಹೆಚ್ಚಿಸಿಕೊಳ್ಳುವುದು ಎಲ್ಲಾ ದೃಷ್ಟಿಯಿಂದ ಒಳಿತು ಎಂದರು.
ವಕೀಲ ಕೆ.ಸಿ.ಚಂದ್ರಶೇಖರ್ ಅವರು ಮಾತನಾಡಿ, ಯುವಕರು ಪುಸ್ತಕಗಳನ್ನು ಓದುವುದಕ್ಕಿಂತ ಹೆಚ್ಚಾಗಿ ಮೊಬೈಲ್ ಗೀಳಿಗೆ ಒಳಗಾಗಿದ್ದರೆ. ಪುಸ್ತಕದ ಮುಂದೆ ತಲೆ ತಗ್ಗಿಸಿದರೆ ಜೀವನದಲ್ಲಿ ತಲೆ ಎತ್ತುವಂತೆ ಮಾಡುತ್ತದೆ. ಆದರೆ ಮೊಬೈಲ್ ಇದಕ್ಕೆ ತದ್ವಿರುದ್ಧವಾಗಿ ಕೆಲಸ ಮಾಡುತ್ತದೆ. ಮೊಬೈಲ್ ಇಂದಿನ ದಿನಗಳಲ್ಲಿ ಮೊಬೈಲ್ ಅಗತ್ಯವೇ ಆದರೂ ಅದರ ಮಿತವಾದ ಬಳಕೆ ಒಳ್ಳೆಯದು. ಇಡೀ ವಿಶ್ವದಲ್ಲಿ ಭಾರತದ ಸಂವಿಧಾನಕ್ಕೆ ವಿಶೇಷವಾದ ಸ್ಥಾನಮಾನವಿದೆ. ಇಂಥಹ ಸಂವಿಧಾನವನ್ನು ಪಡೆದ ನಾವುಗಳೇ ಪುಣ್ಯವಂತರು. ಸಂವಿಧಾನದ ಅರಿವು ಮೂಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಜೀವನ ಕಷ್ಟಕರವಾಗಬಹುದು. ಕಾನೂನಿನ ಅರಿವು ಇದ್ದಲ್ಲಿ ತಾವು ತಮ್ಮ ಹಕ್ಕುಗಳನ್ನು ಉತ್ತಮವಾಗಿ ಬಳಸಿಕೊಳ್ಳು ಸಾಧ್ಯ ಎಂದರು. ಪ್ರತೀಯೊಬ್ಬರೂ ಕೂಡ ತಮ್ಮ ಬಿಡುವಿನ ಅವಧಿಯಲ್ಲಿ ಮೊಬೈಲ್ ಗೀಳಿಗೆ ಒಳಗಾಗುವುದರ ಬದಲು ಕಾನೂನಿನ ಬಗ್ಗೆ ಅರಿವು ಮೂಡಿಸುವಂಥಹ ಪುಸ್ತಕಗಳನ್ನು ಓದುವುದು ಒಳಿತು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಾಗಾರದಲ್ಲಿ ಕಾಲೇಜಿನ ಪ್ರಾಂಶುಪಾಲ ಬಿ.ಸಿ.ಬಸವರಾಜಪ್ಪ, ಉಪನ್ಯಾಸಕರುಗಳಾದ ದಯಾನಂದ, ರವೀಂದ್ರ ರಾಜನ್, ಶಿವರಾಜ್ ಕುಮಾರ್ ಸೇರಿದಂತೆ ವಿವಿಧ ವಿಭಾಗಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.