ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದುಡ್ಡನ್ನು ಮಾಯ ಮಂತ್ರ ಮಾಡಿ ಸೃಷ್ಟಿ ಮಾಡುತ್ತಾರ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಬಜೆಟ್ ಮಂಡನೆ ಕುರಿತು ತಮ್ಮ ಟ್ವಿಟರ್ ಮೂಲಕ ವ್ಯಂಗ್ಯವಾಡಿದ್ದಾರೆ. “ಸಿಎಎ ಹಾಗೂ ಎನ್ಆರ್ಸಿ ಅನ್ನು ದಲಿತರು, ಆದಿವಾಸಿಗಳು, ಅಲೆಮಾರಿ ಜನಾಂಗದ ಜನ ಸೇರಿದಂತೆ ವಿವಿಧ ಸಮುದಾಯದವರು ವಿರೋಧಿಸಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ, ಆದರೆ ಬಿಜೆಪಿಯವರು ಅದನ್ನು ಮುಸ್ಲಿಂಮರಿಗೆ ಸೀಮಿತಗೊಳಿಸಿ ಜನರ ದಾರಿತಪ್ಪಿಸಲು ಹೊರಟಿದ್ದಾರೆ. ಸಿಎಎ, ಎನ್ಆರ್ಸಿ ಇಡೀ ದೇಶದ ಸಮಸ್ಯೆ, ಒಂದು ಸಮುದಾಯದ್ದಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದುಡ್ಡನ್ನು ಮಾಯ ಮಂತ್ರ ಮಾಡಿ ಸೃಷ್ಟಿ ಮಾಡುತ್ತಾರ? ಬಜೆಟ್ ಅಂದ್ರೆ ಮುಂದಿನ ಹನ್ನೆರಡು ತಿಂಗಳವರೆಗೆ ಸಂಗ್ರಹವಾಗುವ ತೆರಿಗೆ ಮತ್ತು ಖರ್ಚು ಮಾಡಬಹುದಾದ ಅಂದಾಜು ಮೊತ್ತದ ಲೆಕ್ಕ, ಈಗ ಖರ್ಚಾದ ಹಣದ ಲೆಕ್ಕ ಕೊಡುವುದಲ್ಲ. ಯಡಿಯೂರಪ್ಪ ಕೈಸೋತು, ದಾರಿ ಕಾಣದೆ ಪೆದ್ದನಂತೆ ಮಾತನಾಡಲು ಆರಂಭಿಸಿದ್ದಾರೆ. ಕೇಂದ್ರ ಸರ್ಕಾರದ ನೇರ ತೆರಿಗೆ ಸಂಗ್ರಹ ಈ ಸಾಲಿನಲ್ಲಿ ರೂ.2 ಲಕ್ಷ ಕೋಟಿ ಕಡಿಮೆಯಾಗಿದೆ. ಅವರ ಬಳಿ ರಾಜ್ಯ ಸರ್ಕಾರಗಳಿಗೆ ಕೊಡಲು ಹಣವೇ ಇಲ್ಲ, ಹೀಗಾಗಿ ಕರ್ನಾಟಕದ ಖಜಾನೆ ಖಾಲಿಯಾಗಿದೆ. ನರೇಂದ್ರ ಮೋದಿ ದೇಶವನ್ನು ಮತ್ತು ಯಡಿಯೂರಪ್ಪ ರಾಜ್ಯವನ್ನು ದಿವಾಳಿ ಹಂತಕ್ಕೆ ತಂದು ನಿಲ್ಲಿಸಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.










