ಬಂಟ್ವಾಳ: ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್‍ನ ಬರ್ಬರ ಹತ್ಯೆ…

221
firstsuddi

ಬಂಟ್ವಾಳ: ಬೆಂಗಳೂರಿನ ಚಾಮರಾಜನಗರ ನೋಂದಣಿಯ ಇನೋವಾ ಕಾರಿನಲ್ಲಿ ಕುಖ್ಯಾತ ರೌಡಿಯೊರ್ವನ ಕೊಲೆಗೈದು, ಹಂತಕರು ಶವವನ್ನು ಕಾರಿನಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಬಂಟ್ವಾಳ ತಾಲ್ಲೂಕಿನ ಸಜೀಪಮೂಡ ಗ್ರಾಮದ ನಗ್ರಿ ಶಾಂತಿನಗರ ಎಂಬಲ್ಲಿ ಭಾನುವಾರ ನಡೆದಿದೆ. ಕೇರಳ ಮೂಲದ ನಿವಾಸಿ ತಸ್ಲೀಮ್(45) ಹತ್ಯೆಯಾದ ರೌಡಿ ಶೀಟರ್ ಎಂದು ಗುರುತಿಸಲಾಗಿದ್ದು, ಈತನ ಮೇಲೆ ಕೊಲೆ,ಕೊಲೆಯತ್ನ,ರಾಬರಿ ಪ್ರಕರಣವಿದ್ದು, ನಟೋರಿಯಸ್ ರೌಡಿ ಜಿಯಾ ಗ್ಯಾಂಗ್ ನಲ್ಲಿ ಈತ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಭೂಗತ ಜಗತ್ತಿನ ನೇರ ಸಂಪರ್ಕ ಹೊಂದಿದ್ದ ತಸ್ಲೀಮ್ ಕಳೆದ ವರ್ಷ ಮಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿ ಬೆಳಗಾವಿ ಜೈಲಿನಲ್ಲಿದ್ದರು. ಎರಡು ದಿನದ ಹಿಂದೆ ಜಾಮೀನು ಪಡೆದು ಹೊರ ಬಂದಿದ್ದರು. ಆ ಬಳಿಕ ದುಷ್ಕರ್ಮಿಗಳು ತಸ್ಲೀಮ್ ಅವರನ್ನು ಅಪಹರಿಸಿ ಹತ್ಯೆ ಮಾಡಿ ಮೃತದೇಹವನ್ನು ಕಾರಿನಲ್ಲೇ ಬಿಟ್ಟು ಪರಾರಿಯಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ಠಾಣಾ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.