ಬೆಂಗಳೂರು : ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಬಿಸಿಯೂಟ ಕಾರ್ಯಕರ್ತೆಯರ ಶಾಂತಿಯುತ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ ನಿಷೇಧಾಜ್ಞೆ ಹೇರಿ ಬಿಸಿಯೂಟ ಕಾರ್ಯಕರ್ತೆಯರ ಶಾಂತಿಯುತ ಪ್ರತಿಭಟನೆಗೂ ಅವಕಾಶ ನೀಡದೆ ಕಿರುಕುಳ ನೀಡುತ್ತಿರುವುದು ಖಂಡನೀಯ. ಜಿಲ್ಲಾ ಕೇಂದ್ರಗಳಲ್ಲಿಯೂ ಪೊಲೀಸರು ಕಾರ್ಯಕರ್ತೆಯರನ್ನು ಬೆದರಿಸುತ್ತಿರುವ ವರದಿಗಳು ಬರುತ್ತಿವೆ. ಬಿ.ಎಸ್. ಯಡಿಯೂರಪ್ಪ ಅವರೇ, ರಾಜ್ಯದಲ್ಲಿರುವುದು ಚುನಾಯಿತ ಸರ್ಕಾರವೇ? ಸರ್ವಾಧಿಕಾರಿ ಆಡಳಿತವೇ?
ನಮ್ಮ ಸರ್ಕಾರ ಇದ್ದಾಗ ಪ್ರತಿಭಟನಾ ನಿರತ ಬಿಸಿಯೂಟ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ಮಾಸಿಕ 500 ರೂ. ಗೌರವಧನ ಹೆಚ್ಚಿಸಿದ್ದೆ. ಪ್ರತಿಭಟನಕಾರರ ಮೇಲೆ ಪೊಲೀಸರ ಛೂ ಬಿಟ್ಟಿರುವ ಈಗಿನ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕನಿಷ್ಠ ಅಹವಾಲನ್ನು ಆಲಿಸುವ ಮನುಷ್ವತ್ವವೂ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.












