ಮೂಡಿಗೆರೆ : ಸ್ವಚ್ಛ ಭಾರತ್ ಅಭಿಯಾನ ಸೇರಿದಂತೆ ನಾನಾ ಯೋಜನೆಗಳ ಮೂಲಕ ಸರ್ಕಾರವು ಶೌಚಾಲಯಗಳ ಮಹತ್ವ ಸಾರುವ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುತ್ತಿರುವ ಇಂದಿನ ದಿನಗಳಲ್ಲಿ ಪಟ್ಟಣದ ಹೃದಯ ಭಾಗವಾಗಿರುವ ಪೋಲೀಸ್ ಠಾಣಾ ಮುಂಭಾಗದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದು ದಶಕಗಳ ಹಿಂದೆ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಪಟ್ಟಣ ಪಂಚಾಯತಿ ವತಿಯಿಂದ ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ ಮಾಡಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಲಾಗಿತ್ತು. ಅಂದಿನ ದಿನಗಳಲ್ಲಿ ಇದು ಸಾರ್ವಜನಿಕರ ಪ್ರಶಂಸೆಗೆ ಕೂಡ ಕಾರಣವಾಗಿತ್ತು. ಆದರೆ ದಿನಕಳೆದಂತೆ “ರಾಯರ ಕುದುರೆ ಕತ್ತೆ ಆಯಿತು” ಎನ್ನುವ ಗಾದೆಯಂತೆ ನಿರ್ವಹಣೆಯ ಕೊರತೆಯಿಂದಾಗಿ ಶೌಚಾಲಯವು 7 ವರ್ಷಗಳಿಂದ ಮುಚ್ಚಲ್ಪಟ್ಟಿದ್ದು, ಸಾರ್ವಜನಿಕರು ತಮ್ಮ ಶೌಚ ಬಾಧೆ ತೀರಿಸಿಕೊಳ್ಳಲು ಪೊದೆಗಳನ್ನು ಹುಡುಕಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ನಿಜವಾದ ವಸ್ತುಸ್ಥಿತಿಯೆಂದರೆ ಶೌಚಾಲಯ ನಿರ್ಮಾಣ ಮಾಡಿರುವ ಸ್ಥಳವು ಪಟ್ಟಣದ ಮುಖ್ಯ ವಾಣಿಜ್ಯ ಕೇಂದ್ರವಾಗಿದ್ದು, ಪಿ.ಡಬ್ಲ್ಯು.ಡಿ ಇಲಾಖೆ, ತಾಲ್ಲೂಕು ಕಛೇರಿ, ಪೋಲೀಸ್ ಠಾಣೆ, ಎಲ್‍ಐಸಿ ಕಛೇರಿ, ವ್ಯವಸಾಯ ಸಹಕಾರಿ ಸಂಘ, ಬ್ಯಾಂಕುಗಳು ಸೇರಿದಂತೆ ಹಲವು ವಾಣಿಜ್ಯ ವ್ಯಾಪಾರದ ಜನನಿಬಿಡ ಸ್ಥಳವಾಗಿದೆ. ಸದಾ ಚಟುವಟಿಕೆಯಿಂದ ಕೂಡಿರುವ ಇಂಥಹ ಸ್ಥಳದಲ್ಲಿ ಸಾರ್ವಜನಿಕರು ತಮ್ಮ ಶೌಚ ಕಾರ್ಯಗಳನ್ನು ತೀರಿಸಿಕೊಳ್ಳಲು ಪರದಾಡುತ್ತಿದ್ದರು. ಇಂಥಹ ಆಯಕಟ್ಟಿನ ಜಾಗದಲ್ಲಿ ಸಾರ್ವಜನಿಕ ಶೌಚಾಲಯದ ನಿರ್ಮಾಣದ ಒತ್ತಡ ಕೇಳಿಬಂದಿದ್ದರಿಂದ ಶೌಚಾಲಯದ ನಿರ್ಮಾಣ ಕಾರ್ಯ ಕೂಡ ಆಗಿತ್ತು. ಆದರೆ ಪಟ್ಟಣ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯ ಮಾಡಿ ನಿರ್ಮಿಸಿದ ಕಟ್ಟಡ ಇದೀಗ ಸರಿಯಾದ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದು, ಸಾರ್ವಜನಿಕರಿಂದ ತೀವ್ರ ಆರೋಪ ವ್ಯಕ್ತವಾಗಿದೆ.
ಎಂ.ಜಿ.ರಸ್ತೆಯಲ್ಲಿರುವ ಅಂಗಡಿ ಮಾಲೀಕ ವಿಜಯ್ ಅವರು ಹೇಳುವ ಪ್ರಕಾರ, ನಾನು ಹಲವು ವರ್ಷಗಳಿಂದ ಎಂ.ಜಿ ರಸ್ತೆಯ ಪಕ್ಕದಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದೇನೆ. ಅಂಗಡಿ ಮಳಿಗೆ ಇರುವ ಬಹುತೇಕ ಕಟ್ಟಡಗಳಲ್ಲಿ ಶೌಚಾಲಯಗಳಿಲ್ಲ. ಆದ್ದುರಿಂದ ನಮಗೆ ಸಾರ್ವಜನಿಕ ಶೌಚಾಲಯದ ಅಗತ್ಯವಿದೆ. ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ಅಂಗಡಿ ಮಾಲೀಕರು ಮತ್ತು, ವ್ಯಾಪಾರ ಸಂಘ, ಟ್ಯಾಕ್ಸಿ ಚಾಲಕ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಒಟ್ಟುಗೂಡಿ ಪಟ್ಟಣ ಪಂಚಾಯತಿ ಮೇಲೆ ಒತ್ತಡ ತಂದು ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ಒತ್ತಾಯಿಸಿ ನೂತನ ಶೌಚಾಲಯದ ನಿರ್ಮಾಣ ಕಾರ್ಯದಲ್ಲಿ ಯಶಸ್ವಿಯಾಗಿದ್ದೆವು. ಶೌಚಾಲಯ ನಿರ್ಮಾಣವಾಯಿತಾದರೂ ಸೂಕ್ತ ನಿರ್ವಹಣೆಯಿಲ್ಲದೆ ಕೆಲವೇ ದಿನಗಳಲ್ಲಿ ಬಾಗಿಲು ಮುಚ್ಚಲಾಯಿತು. ಇದರಿಂದಾಗಿ ಸಮಸ್ಯೆಯು ಯಥಾಸ್ಥಿತಿಗೆ ತಲುಪಿದ್ದು ಎಲ್ಲರಿಗೂ ತೀವ್ರ ತೊಂದರೆಯಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಆಟೋ ಚಾಲಕ ಶ್ಯಾಮ್ ಅವರು, ವಿವಿಧ ಕಛೇರಿಗಳು, ಅಂಗಡಿಗಳು ಸೇರಿದಂತೆ ಪ್ರತೀ ನಿತ್ಯ ಸಾವಿರಾರು ಜನರು ತಿರುಗಾಡುವ ಈ ಜಾಗದಲ್ಲಿ ಸಾರ್ವಜನಿಕರ ಶೌಚಾಲಯದ ಅವಶ್ಯಕತೆ ಇದೆ. ಇದ್ದ ಒಂದು ಶೌಚಾಲಯವನ್ನು ಕಾರಣ ನೀಡದೆ ಮುಚ್ಚಲಾಗಿದೆ. ಇಂದಿಗೂ ಕೂಡ ಕಟ್ಟಡ ಭದ್ರವಾಗಿದೆ. ಆದರೆ ನಿರ್ವಹಣೆಯ ಕೊರತೆಯಿಂದಾಗಿ ಬಾಗಿಲು ಮುಚ್ಚಲಾಗಿದೆ. ಕೆಲವೇ ಸಾವಿರ ರೂಪಾಯಿಗಳಲ್ಲಿ ಕಟ್ಟಡವನ್ನು ನವೀಕರಿಸಿ ಸಾರ್ವಜನಿಕರ ಬಳಕೆಗೆ ಬಿಡಬಹುದಾಗಿದೆ. ಆದರೆ ಇದರ ಬಗ್ಗೆ ಯಾವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸದಿರುವುದು ಅಸಹನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರಿ ಕಛೇರಿಗಳಿಗೆ, ವ್ಯಾಪಾರ ವಹಿವಾಟುಗಳಿಗೆ ಪ್ರತೀ ನಿತ್ಯ ಹಳ್ಳಿಗಳು ಹಾಗೂ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಸಾರ್ವಜನಿಕರ ಮೂಲಭೂತ ಅವಶ್ಯಕತೆಯನ್ನು ಮರೆತು, ಅವಶ್ಯಕತೆಯೇ ಇಲ್ಲದ ಇತರೆ ವಿಷಯಗಳ ಕಡೆ ಜನರ ಗಮನವನ್ನು ತಿರುಗಿಸುತ್ತಿರುವ ವಿವೇಚನಾರಹಿತ ಜನಪ್ರತಿನಿಧಿಗಳು ಇನ್ನು ಮುಂದಾದರೂ ಮೂಲಭೂತ ಅವಶ್ಯಕತೆಗಳಲ್ಲಿ ಪ್ರಮುಖವಾದ ಸಾರ್ವಜನಿಕ ಶೌಚಾಲಯದ ಬಗ್ಗೆ ಅಧಿಕಾರಿಗಳ ಬಳಿ ಕೆಲಸ ಮಾಡಿಸುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.










