ಮೂಡಿಗೆರೆ : ನೆರೆಪೀಡಿತ ಶಾಲೆಯ ಮಕ್ಕಳಿಗೆ ಬೆಂಗಳೂರು ನೆರಳು ಪೌಂಡೇಶನ್ ವತಿಯಿಂದ ಉಚಿತ ಶಾಲಾ ಕಿಟ್ ವಿತರಣೆ…

475
firstsuddi

ಕೊಟ್ಟಿಗೆಹಾರ : 2019ರ ಆಗಸ್ಟ್ ತಿಂಗಳಿನಲ್ಲಿ ಸುರಿದ ರಣಭೀಕರ ಮಳೆಯಿಂದ ಸಂಭವಿಸಿದ ಭೂಕುಸಿತ ಹಾಗೂ ಗುಡ್ಡ ಕುಸಿತದಿಂದ ತಾಲ್ಲೂಕಿನ ಜನರು ಹೈರಾಣಾಗಿದ್ದರು. ಸಂತ್ರಸ್ಥರಿಗೆ ಅನೇಕರು ಸಹಾಯ ಮಾಡಿದ್ದರು. ಆದರೆ ಬೆಂಗಳೂರಿನ ನೆರಳು, ಅವಿರತ, ಪರ್ಸಿಸ್ಟೆನ್ಸ್ ಪೌಂಡೇಶನ್ ಸಂಯುಕ್ತಾಶ್ರಯದಲ್ಲಿ ನೆರೆ ಸಂಭವಿಸಿದ 7 ಶಾಲೆಯ ಮಕ್ಕಳಿಗೆ ಒಂದು ವರ್ಷಕ್ಕೆ ಬೇಕಾಗುವ ಪುಸ್ತಕ, ವಿವಿಧ ಸಾಮಾಗ್ರಿಗಳು, ಬ್ಯಾಗ್, ಶೂಗಳ ಶಾಲಾ ಕಿಟ್ ಅನ್ನು ಇಂದು ವಿತರಿಸಲಾಯಿತು.
ಅತ್ತಿಗೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರಿನ ಅವಿರತ ಸಂಸ್ಥೆಯ ಶಿವಪ್ರಕಾಶ್ ಅವರು, ನೆರೆಯಿಂದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂಬ ಹಿತದೃಷ್ಟಿಯಿಂದ ವಿವಿಧ ಶಾಲೆಯ ಮಕ್ಕಳಿಗೆ ಉಚಿತ ಶಾಲಾ ಸಾಮಾಗ್ರಿ ನೀಡಿದ್ದೇವೆ. ಇದರ ಸದುಪಯೋಗ ಪಡೆದು ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯಬೇಕು ಎಂದರು.
ಮೂಡಿಗೆರೆ ತಾಲ್ಲೂಕು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಮಾತನಾಡಿ, ಸಂಕಷ್ಟದಲ್ಲಿರುವಾಗ ದೇವರು ಯಾವುದೋ ರೂಪದಲ್ಲಿ ಸಹಾಯ ಮಾಡುತ್ತಾನೆ ಎಂಬುದಕ್ಕೆ ಇದೇ ಉತ್ತಮ ನಿದರ್ಶನವಾಗಿದೆ. ನೆರೆಯಿಂದ ಅತಂತ್ರರಾದ ಮಲೆನಾಡಿನ ಶಾಲೆಯ ಮಕ್ಕಳಿಗೆ ಸಾಪ್ಟ್‍ವೇರ್ ಕಂಪೆನಿಗಳ ನೌಕರರು ತ್ಯಾಗದ ಮನೋಭಾವನೆಯನ್ನು ಕ್ರೋಢಿಕರಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ನೆರವು ಪಡೆದ ಪ್ರತಿಯೊಬ್ಬರು ಉತ್ತಮ ಭವಿಷ್ಯದಲ್ಲಿ ನಡೆದು ಬಂದ ಸಂಕಷ್ಟದ ದಾರಿಯನ್ನು ಒಮ್ಮೆ ತಿರುಗಿ ನೋಡಬೇಕು. ಉತ್ತಮ ಪರಿಸರವಾದಿಗಳು ನೆರೆಸಂತ್ರಸ್ತರ ಸಂಕಷ್ಟವನ್ನು ಆಳವಾಗಿ ತಿಳಿದು ಸಹಾಯ ಮಾಡಿದ್ದಾರೆ. ಪರಿಸರದ ಬಗ್ಗೆ ಅರಿಯದ ಪರಿಸರ ವ್ಯಾಧಿಗಳು ಮಾಧ್ಯಮದ ಮೂಲಕ ಅಲ್ಲಸಲ್ಲದ ಹೇಳಿಕೆ ನೀಡಿಕೆ ಸಂತ್ರಸ್ತರನ್ನು ಇಕ್ಕಟ್ಟಿಗೆ ಸಿಲುಕಿಸುವ ಕಾರ್ಯ ಮಾಡುತ್ತಿರುವುದು ಸಲ್ಲದು ಎಂದರು.
ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ.ಭರತ್ ಮಾತನಾಡಿ, ನೌಕರರು ತಮ್ಮ ಸಂಬಳವನ್ನು ತ್ಯಾಗಮಾಡಿ ಬಡ ಮಕ್ಕಳಿಗೆ ನೀಡಿರುವುದು ಸಂಸ್ಥೆಯ ನೌಕರರ ನಿಸ್ವಾರ್ಥ ಸೇವೆಗೆ ಒಂದು ಉದಾಹರಣೆಯಾಗಿದೆ. ಮಕ್ಕಳು ಪುಸ್ತಕ ಮುಂತಾದ ಸಾಮಾಗ್ರಿಗಳನ್ನು ಸದುಪಯೋಗ ಪಡಿಸಿಕೊಂಡು ಉದಾರ ನೀಡಿದ ದಾನಿಗಳ ತ್ಯಾಗ ಪರಿಶ್ರಮವನ್ನು ಸಾರ್ಥಕಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪರ್ಸಿಸ್ಟೆನ್ಸ್ ಪೌಂಡೇಶನ್‍ನ ಆಶೀಮ್, ಮಹಾಲಕ್ಷ್ಮಿ, ಹಿಮಾ, ಸ್ಪರ್ಶ ಟ್ರಸ್ಟ್‍ನ ಶಶಿಧರ್ ಕೋಟ್ಯಾನ್, ಸಂದೀಪ್, ಅಶೋಕ್, ಹರೀಶ್, ರಮ್ಯಾ, ಆರತಿ, ಶ್ರೀಕಾಂತ್, ನಾಗೇಂದ್ರ, ಪರಿಸರವಾದಿ ದಿನೇಶ್ ಹೊಳ್ಳ, ಟಿ.ಎಂ.ಗಜೇಂದ್ರ, ಜೆಸಿಐ ವಿಸ್ಮಯದ ಅಧ್ಯಕ್ಷ ವಾಟೇಖಾನ್ ರವಿ, ಹಳೆ ವಿದ್ಯಾರ್ಥಿ ಎ.ಎಂ.ಹಸೇನ, ಟಿ.ಎಂ.ನರೇಂದ್ರ, ಮುಖ್ಯ ಶಿಕ್ಷಕ ಡಿ.ರಾಜು, ಶಿಕ್ಷಕರಾದ ಕುಮಾರ್, ಮೈಮುನಾಭಿ, ಹಂಸಲೇಖ, ರಂಜನ, ದಿನೇಶ್, ಸಂಜಯ್ ಗೌಡ, ಉಮೇಶ್ ಬಾಳೂರು, ವೀರಪ್ಪಗೌಡ, ಆದರ್ಶ್ ಇದ್ದರು.