ಕಡೂರು: ಕತ್ತು ಸೀಳಿ ಗೃಹಿಣಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಪಟ್ಟಣದ ಲಕ್ಷ್ಮೀಶ ನಗರದಲ್ಲಿ ನಡೆದಿದೆ. ಮೃತರನ್ನು ಕವಿತಾ (35) ಎಂದು ಗುರುತಿಸಲಾಗಿದೆ. ಬೀರೂರಿನ ದಂತ ವೈದ್ಯ ಡಾ. ರೇವಂತ್ ಅವರ ಪತ್ನಿ ಎನ್ನಲಾಗಿದ್ದು.ವೈದ್ಯ ಪತಿ ಕ್ಲೀನಿಕ್‍ಗೆ ಹೋದಾಗ ಈ ದುರ್ಘಟನೆ ನಡೆದಿದೆ. ಕವಿತಾಳನ್ನ ಸಂಜೆ 6.45 ರಿಂದ 8.15ರೊಳಗೆ ಕೊಲೆ ಮಾಡಲಾಗಿದೆ. ಸಂಜೆ 6.45ಕ್ಕೆ ಆಕೆ ಕೊನೆಯದಾಗಿ ಆಕೆ ಗಂಡನೊಂದಿಗೆ ಮಾತನಾಡಿದ್ದಾಳೆ. 8.15ಕ್ಕೆ ಆಕೆಯ ಸಾವಿನ ಸಂಗತಿ ಹೊರಬಂದಿದೆ. ಕೊಲೆಗೈದವರು ಮನೆಯ ಬೀರುವಿನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನ ದೋಚಿದ್ದಾರೆ. ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ.ಸ್ಥಳಕ್ಕೆ ಭೇಟಿ ನೀಡಿರೋ ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ರವಾನಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮನೆಯ ಸುತ್ತಮುತ್ತ ಇದ್ದ ಸಿಸಿಟಿವಿ ದೃಶ್ಯಾವಳಿಗಳನ್ನ ಪೊಲೀಸರು ವಶಪಡಿಕೊಂಡಿದ್ದಾರೆ. ಆದ್ರೆ, ಒಂಟಿ ಮಹಿಳೆಯ ಈ ರೀತಿ ಬರ್ಬರ ಕೊಲೆ ಕಂಡ ಕಡೂರಿಗರು ಬೆಚ್ಚಿ ಬಿದ್ದಿದ್ದಾರೆ. ಘಟನೆ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.










