ಬೆಂಗಳೂರು : ಪತಿ ಮನೆಯವರ ಕಿರುಕುಳದಿಂದ ಬೇಸತ್ತು ಖ್ಯಾತ ಹಿನ್ನಲೆ ಗಾಯಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ನಾಗರಬಾವಿಯಲ್ಲಿ ನಡೆರದಿದೆ. ಸುಶ್ಮಿತಾ(25) ಆತ್ಮಹತ್ಯೆ ಮಾಡಿಕೊಂಡ ಗಾಯಕಿ. ಸುಶ್ಮಿತಾ ಅವರು ಕಳೆದ ಒಂದು ವರ್ಷದ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶರತ್ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಮದುವೆಯಾಗಿ ಸ್ವಲ್ಪ ದಿನದ ಬಳಿಕ ಸುಶ್ಮಿತಾ ಅವರಿಗೆ ತನ್ನ ಪತಿ ಹಾಗೂ ಪತಿಯ ಕುಟುಂಬಸ್ಥರು ಕಿರುಕುಳ ನೀಡಲು ಆರಂಭಿಸಿದ್ದು, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದು ತನ್ನ ತಮ್ಮನಿಗೆ ವಾಟ್ಸಾಪ್ ಮೂಲಕ ಸಂದೇಶವನ್ನು ರವಾನಿಸಿದ್ದಾರೆ.
ಡೆತ್ನೋಟ್ನಲ್ಲಿ, “ಅಮ್ಮ ನಾನು ಮಾಡಿದ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತಿದ್ದೇನೆ. ನನ್ನನ್ನು ಕ್ಷಮಿಸು, ನನ್ನ ಪತಿ ಆತನ ದೊಡ್ಡಮ್ಮನ ಮಾತು ಕೇಳಿ ಪ್ರತಿದಿನ ನನಗೆ ಚಿತ್ರಹಿಂಸೆ ನೀಡುತ್ತಿದ್ದರು. ನಾನು ಏನೇ ಹೇಳೀದರೂ ಮನೆ ಬಿಟ್ಟು ಹೋಗು ಎಂದು ಹೇಳುತ್ತಿದ್ದರು. ನನಗೆ ಮಾನಸಿಕವಾಗಿ ತುಂಬಾ ಕಿರುಕುಳ ನೀಡುತ್ತಿದ್ದರು. ನನ್ನನ್ನು ನಮ್ಮ ಊರಿನಲ್ಲೆ ಮಣ್ಣು ಮಾಡು ಅಥವಾ ಸುಡು. ನನ್ನ ಕಾರ್ಯವನ್ನು ನನ್ನ ತಮ್ಮನೇ ಮಾಡಲಿ. ನನ್ನ ಸಾವಿಗೆ ಶರತ್, ವೈದೇಹಿ, ಗೀತಾ ಅವರೇ ನೇರ ಕಾರಣ. ಅವರನ್ನು ಮಾತ್ರ ಸುಮ್ಮನೆ ಬಿಡಬೇಡಿ. ಇಲ್ಲವಾದರೆ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂದು ಸಂದೇಶ ರವಾನಿಸಿ ತನ್ನ ತಾಯಿಯ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಶ್ಮಿತಾ ಅವರು ‘ಹಾಲು-ತುಪ್ಪ’, ‘ಶ್ರೀಸಾಮಾನ್ಯ’ ಸೇರಿ ಹಲವು ಸಿನಿಮಾಗಳಲ್ಲಿ ಹಾಡಿದ್ದಾರೆ. ಸದ್ಯ ಈ ಕುರಿತು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










