ನಟ ದರ್ಶನ್ ಅಭಿಮಾನಿಗಳಿಂದ ಪೊಲೀಸ್ ಪೇದೆ ಮೇಲೆ ಹಲ್ಲೆ-ಎಫ್.ಐ.ಆರ್ ದಾಖಲು…

176
firstsuddi

ಬೆಂಗಳೂರು : ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬ ಆಚರಣೆ ವೇಳೆ ದರ್ಶನ್ ಅಭಿಮಾನಿಗಳು ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದು, ಸದ್ಯ ಈ ಕುರಿತು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ.16ರಂದು ದರ್ಶನ್ ಅವರ ಹುಟ್ಟುಹಬ್ಬ ಆಚರಣೆ ಇದ್ದ ಹಿನ್ನೆಲೆ, ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್‍ನ ನಿವಾಸದ ಬಳಿ ಪ್ರತಿವರ್ಷದಂತೆ ಈ ವರ್ಷವೂ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆಚರಣೆಯಲ್ಲಿ ತಮ್ಮ ನೆಚ್ಚಿನ ನಟ ದರ್ಶನ್ ಅವರಿಗಾಗಿ ಹುಟ್ಟುಹಬ್ಬದ ಶುಭಾಷಯ ಕೋರಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಜ್ಞಾನಭಾರತಿ ಪೊಲೀಸ್ ಠಾಣೆಯ ಪೇದೆ ದೇವರಾಜ್ ಸೇರಿದಂತೆ ಹಲವರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಅಭಿಮಾನಿಗಳು ಸರದಿಯಲ್ಲಿ ಹೋಗಲು ಯಾವುದೇ ಸೂಕ್ತ ವ್ಯವಸ್ಥೆ ಮಾಡದೆ ಇದ್ದ ಕಾರಣ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಈ ಸಂದರ್ಭದಲ್ಲಿ ಸರದಿಯಲ್ಲಿ ಹೋಗುವಂತೆ ಪೇದೆ ದೇವರಾಜು ಅವರು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಕೆಲ ಅಭಿಮಾನಿಗಳು ದೇವರಾಜ್ ಅವರ ಮೇಲೆ ಹಲ್ಲೆ ಮಾಡಿದ್ದು, ಅವರು ತಲೆ ಹಾಗೂ ಬಲಗಣ್ಣಿಗೆ ಗಂಭೀರವಾಗಿ ಗಾಯವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಪೇದೆ ದೇವರಾಜು ಅವರು ಹೇಳಿಕೆಯಂತೆ ದೂರನ್ನು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.