ಹತ್ತು ತಿಂಗಳ ಮಗುವನ್ನು ನೀರಲ್ಲಿ ಮುಳುಗಿಸಿ ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾದ ತಾಯಿ…!

189
firstsuddi

ಚಿತ್ರದುರ್ಗ : ಮಗುವನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿ ಬಳಿಕ ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಐನಳ್ಳಿಯಲ್ಲಿ ನಡೆದಿದೆ. ಆಶಾಬಾಯಿ(24) ತನ್ನ ಹತ್ತು ತಿಂಗಳ ಮಗುವನ್ನು ನೀರಲ್ಲಿ ಮುಳುಗಿಸಿ ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ. ಕಳೆದ ಎರಡು ವರ್ಷದ ಹಿಂದೆ ಹೊಳಲ್ಕೆರೆ ಲಂಬಾಣಿಹಟ್ಟಿಯ ಹೇಮಂತ್ ಎಂಬುವವರ ಜೊತೆ ಪ್ರೀತಿಸಿ ಮದುವೆಯಾದ ಆಶಾಬಾಯಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಹೆರಿಗೆ ಆದಾಗಿನಿಂದ ಪದೇ ಪದೇ ಹೊಟ್ಟೆ ನೋವು ಬರುತ್ತಿತ್ತು ಎನ್ನಲಾಗಿದ್ದು, ಇದರಿಂದ ತೀವ್ರ ಖಿನ್ನತೆಗೆ ಒಳಗಾದ ಆಶಾಬಾಯಿ ಅವರು ತಾನು ಸತ್ತರೆ ಮಗು ಅನಾಥವಾಗುತ್ತದೆ ಎಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಮಗುವನ್ನು ನೀರಿನ ಟಬ್ ಒಳಗೆ ಮುಳುಗಿಸಿ ಕೊಂದು ಬಳಿಕ ತಾನೂ ನೇಣಿಗೆ ಕೊರಳೊಡ್ಡಿದ್ದಾರೆ. ಈ ಕುರಿತು ಚಿಕ್ಕಜಾಜೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.