ಮೂಡಿಗೆರೆ : ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವಲ್ಲಿ ಎಲ್ಲಾ ಮಹಿಳೆಯರು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಮಾಜಿ ಸಚಿವೆ ಮೋಟಮ್ಮ ಅವರು ಅಭಿಪ್ರಾಯ ಪಟ್ಟರು.
ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಸ್ತೂರ್ಬಾ ಕ್ರೀಡಾ ಯುವತಿ ಮಂಡಳಿ, ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ, ಸಂಚಿ ಹೊನ್ನಮ್ಮ ಮಹಿಳಾ ಮಂಡಳಿಗಳ ಆಶ್ರಯದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಪುರುಷರಿಗೆ ಸಮಾನವಾದ ಸಾಮಥ್ರ್ಯವನ್ನು ಹೊಂದಿದ್ದು, ಸಮಾಜದ ಎಲ್ಲಾ ರಂಗಗಳಲ್ಲಿ ಮುಂದಿದ್ದಾರೆ. ಆದರೆ ಸಾಮಾಜಿಕವಾಗಿ ಮಹಿಳೆಯರನ್ನು ಹಿಂದಿಕ್ಕಿ ಅಸಮಾನತೆ ಪ್ರದರ್ಶಿಸಲಾಗುತ್ತಿದೆ. ಮಹಿಳೆ ಕೌಟುಂಬಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡುತ್ತಲೇ ಬಂದಿದ್ದಾಳೆ ಆದರೂ ಸಹ ಸಮಾಜದಲ್ಲಿ ಅವಳಿಗೆ ಸಿಗಬೇಕಾದ ಸ್ಥಾನಮಾನಗಳು ಸಿಗುತ್ತಿಲ್ಲ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಸಹ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ.
ಬಹುತೇಕ ಕಡೆಗಳಲ್ಲಿ ಇಂದಿಗೂ ಸಹ ಬಾಲ್ಯ ವಿವಾಹ, ಹೆಣ್ಣು ಮಗುವಿನ ಬ್ರೂಣ ಹತ್ಯೆಯಂಥಹ ಶೋಷಣೆಗಳು ಚಾಲ್ತಿಯಲ್ಲಿವೆ. ಸರಕಾರಗಳು ಹೆಣ್ಣುಮಕ್ಕಳ ರಕ್ಷಣೆಗಾಗಿ ಹಲವಾರು ಕಾನೂನುಗಳನ್ನು ಜಾರಿ ಮಾಡಿದ್ದರೂ ಸಹ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಕಡಿಮೆಯಾಗದಿರುವುದು ಕಳವಳಕಾರಿಯಾಗಿದೆ. ಸಾಮಾಜಿಕ ಮಟ್ಟದಲ್ಲಿ ಹೆಣ್ಣುಮಕ್ಕಳು ಧೈರ್ಯದಿಂದ ಮುಂದುವರೆದಲ್ಲಿ ಇಂತಹ ಘಟನೆಗಳನ್ನು ಹಿಮ್ಮೆಟ್ಟಬಹುದು. ಆದರೆ ಕೆಲವು ಕಡೆಗಳಲ್ಲಿ ಸ್ವಾತಂತ್ರ್ಯದ ನೆಪದಲ್ಲಿ ಕಾನೂನು ದುರ್ಬಳಕೆ ಪ್ರಕರಣಗಳು ಸ್ತ್ರೀಯರ ಮೇಲಿನ ಹಿಡಿತ ಹೆಚ್ಚು ಮಾಡಲು ಕಾರಣವಾಗಿದೆ. ಕಾನೂನುಗಳನ್ನು ತಮ್ಮ ರಕ್ಷಣೆಗೆ ಬಳಸಿಕೊಳ್ಳುವುದರ ಜೊತೆಗೆ ಸಮಾಜಕ್ಕೆ ಉಪಯುಕ್ತಕಾರಿಯಾಗಿ ಬಳಕೆ ಮಾಡುವಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಸಂಚಿ ಹೊನ್ನಮ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಟಿ.ಕಮಲಾಕ್ಷಮ್ಮ ಅವರು ಮಾತನಾಡಿ, ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಪ್ರತೀ ಗ್ರಾಮದಲ್ಲಿ ಒಂದೊಂದು ಗ್ರಾಮವನ್ನು ಆಯ್ದುಕೊಂಡು ವಿವಿಧ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಿಳಾ ಸಂಘಟನೆಗಳ ಕಾರ್ಯಕರ್ತರುಗಳು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಹಿಳೆಯರು ತಮ್ಮ ಕೀಳರಿಮೆಯನ್ನು ಬಿಟ್ಟು ಇಂಥಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಮಾಜದ ಮುಂಚೂಣಿಗೆ ಬರಬೇಕು ಎಂದು ಸಲಹೆ ನೀಡಿದರು.
ಸಂಚಿ ಹೊನ್ನಮ್ಮ ಕಾರ್ಯದರ್ಶಿ ಪೂರ್ಣಿಮಾ, ನಿರ್ದೇಶಕರುಗಳಾದ ಬಿಳಗುಳದ ಸುಧಾ ಮಂಜುನಾಥ್, ಹೆಚ್.ಟಿ.ವರಮಹಾಲಕ್ಷ್ಮಿ, ಕಸಾಪ ಕಸಬಾ ಹೋಬಳಿ ಅಧ್ಯಕ್ಷೆ ಬಾನುಮತಿ, ಪ.ಪಂ. ಸದಸ್ಯ ಹೆಚ್.ಪಿ.ರಮೇಶ್, ಕಿರಗುಂದ ಗ್ರಾ.ಪಂ.ಅಧ್ಯಕ್ಷೆ ವಿಂದ್ಯಾ ರಘು, ಅಂಬಾವತಿ, ಕಲ್ಯಾಣಿ, ಜಯಮ್ಮ, ಬಿಳಗುಳದ ಕಲ್ಯಾಣಿ, ದಿವ್ಯಾ, ಬೃಂದಾ, ಕಾಂಗ್ರಸ್ ವಕ್ತಾರ ಎಂ.ಎಸ್ ಅನಂತ್ ಮುಮತಾದವರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವಲ್ಲಿ ಎಲ್ಲಾ ಮಹಿಳೆಯರು ಸಂಘಟಿತರಾಗಿ ಹೋರಾಟ ಮಾಡಬೇಕು...










