ಚಿಕ್ಕಮಗಳೂರು : ಸಾಕು ನಾಯಿ ಬರ್ಥ್ ಡೇ ಆಚರಣೆ ವೇಳೆ ಕರೆಯದಿದ್ದರೂ ಬೀದಿ ನಾಯಿಯೊಂದು ಬಂದಿರುವಂತಹಾ ಅಪರೂಪದ ಘಟನೆ ನಗರದಲ್ಲಿ ನಡೆದಿದೆ. ನಗರದ ಹೌಸಿಂಗ್ ಬೋರ್ಡ್ ನಿವಾಸಿಗಳಾದ ಹರೀಶ್ ಹಾಗೂ ರಂಜಿತಾ ದಂಪತಿ ಪ್ರಾಣಿ ಪ್ರಿಯರು. ತಮ್ಮ ಮನೆಯಲ್ಲಿ ನಾಯಿ-ಬೆಕ್ಕು ಸೇರಿದಂತೆ ಹಕ್ಕಿ-ಪಕ್ಷಿಗಳನ್ನ ಸಾಕಿದ್ದಾರೆ. ಆದ್ರೆ, ಕಳೆದೊಂದು ವರ್ಷದ ಹಿಂದೆ ಮೂಡಿಗೆರೆಯ ಪ್ಲಾಂಟರೊಬ್ಬರ ಮನೆಯಿಂದ ತಂದ ತಮ್ಮ ಮುದ್ದಿನ ನಾಯಿ ಸ್ಕೂಬಿಗೆ ಒಂದು ವರ್ಷ ತುಂಬಿದ ಹಿನ್ನೆಲೆ ಅದಕ್ಕೆ ಮಕ್ಕಳಿಗೆ ಆಚರಿಸಿದಂತೆ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. ನಾಯಿಯ ಕಣ್ಣಿಗೆ ಕನ್ನಡಕ ಹಾಕಿ, ತಲೆಗೆ ಟೋಪಿ ಹಾಕಿ ನಾಲ್ಕು ಕಾಲುಗಳಿಗೂ ಬಣ್ಣ-ಬಣ್ಣದ ಟೇಪ್ ಕಟ್ಟಿ ಕೇಕ್ ಕತ್ತಿರಿಸಿ ಸಂಭ್ರಮಿಸಿದ್ದಾರೆ. ಈ ವೇಳೆ, ಅದೇ ಬೀದಿಯ ಬೀದಿ ನಾಯಿಯೊಂದು ತಮ್ಮ ಸ್ನೇಹಿತನ ಹುಟ್ಟುಹಬ್ಬದ ಆಚರಣೆಗೆ ಆಹ್ವಾನವಿಲ್ಲದಿದ್ದರೂ ಆಗಮಿಸಿದ್ದು ಮಾತ್ರ ವಿಶೇಷವಾಗಿತ್ತು. ನಾಯಿಯ ಹುಟ್ಟುಹಬ್ಬ ಆಚರಿಸಿದ ಹರೀಶ್ ಹಾಗೂ ರಂಜಿತಾ ದಂಪತಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದಾರೆ. ಸ್ಕೂಬಿ ಹಾಗೂ ಬೀದಿ ನಾಯಿಗೆ ನಾನ್ ವೆಜ್ ಊಟ ಹಾಕಿದ್ದಾರೆ.