ಮಕ್ಕಳು ತನ್ನಂತೆ ಬೆಳೆಯುತ್ತಿಲ್ಲ ಎಂದು ಕೋಪಗೊಂಡು ಇಬ್ಬರು ಪುಟ್ಟ ಮಕ್ಕಳನ್ನು ಕೊಂದ ಪಾಪಿ ತಂದೆ…!

1255
firstsuddi

ಬೆಂಗಳೂರು : ಮಕ್ಕಳು ನನ್ನಂತೆ ಬೆಳೆಯುತ್ತಿಲ್ಲ ಎಂದು ಕೋಪಗೊಂಡು ಮಲಗಿದ್ದ ಇಬ್ಬರು ಪುಟ್ಟ ಮಕ್ಕಳನ್ನು ತಂದೆಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ಅಕ್ಷಯನಗರದ ಹನಿ ಡವ್ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ. ತೌಶಿನಿ(3) ಹಾಗೂ ಒಂದು ವರ್ಷದ ಶಾಸ್ತಾ ತಂದೆಯ ನೀಚ ಕೃತ್ಯಕ್ಕೆ ಬಲಿಯಾದ ಮಕ್ಕಳು. ಶೆಫ್ ಆಗಿ ಕಾರ್ಯನಿರ್ವಹಿಸುತ್ತಿದ್ದ ತಂದೆ ಜತಿನ್ ಅವರು ಇತ್ತೀಚೆಗೆ ಕೆಲಸ ಇಲ್ಲದೇ ಹೆಂಡತಿ ದುಡಿದು ತರುತ್ತಿದ್ದ ಹಣದಲ್ಲಿ ಜೀವನವನ್ನು ಸಾಗಿಸುತ್ತಿದ್ದರು. ಇದರಿಂದ ಕೆಲಸವಿಲ್ಲದೆ ಹೆಂಡತಿಯ ಹಂಗಿನಲ್ಲಿ ಬದುಕುತ್ತಿದ್ದೇನೆ ಎಂದು ಮಾನಸೀಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಆರೋಪಿ ಜತಿನ್ ಅವರ ಪತ್ನಿ ಟೆಕ್ಕಿಯಾಗಿದ್ದು, ಮನೆಯಲ್ಲಿ ಹೆಂಡತಿ ಇಲ್ಲದ ವೇಳೆ ತನ್ನ ಪಕ್ಕದಲ್ಲಿ ಮಲಗಿದ್ದ ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಪತ್ನಿ ಮನೆಗೆ ಬಂದು ನೋಡಿದಾಗ ವಿಚಾರ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಜತಿನ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮಕ್ಕಳು ನನ್ನ ರೀತಿ ಬೆಳೆಯುತ್ತಿರಲಿಲ್ಲ. ನನ್ನ ಪತ್ನಿಯ ಹಾಗೆ ಬೆಳೆಯುತ್ತಿದ್ದರು. ಹೀಗಾಗಿ ಕೊಲೆ ಮಾಡಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.