ಮೂಡಿಗೆರೆ : ಕೊರೋನಾ ವೈರಸ್ ಸೋಂಕಿನ ಬಗ್ಗೆ ಕೈಗೊಂಡಿರುವ ಮುಂಜಾಗೃತಾ ಕ್ರಮಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಿಟಿ ರವಿ ಅವರು ಮೂಡಿಗೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಂದು ಬೆಳಗ್ಗೆ 11 ಗಂಟೆಗೆ ಮೂಡಿಗೆರೆ ಎಂ.ಜಿ.ಎಂ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ತಾಲ್ಲೂಕು ಆಡಳಿತ ಕೈಗೊಂಡಿರುವ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ತಾಲ್ಲೂಕು ಪಂಚಾಯತಿ ಕಛೇರಿಯ ಆವರಣದಲ್ಲಿರುವ ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಟಾಸ್ಕ್ ಫೋರ್ಸ್ನ’ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುವಲ್ಲಿ ಅಧಿಕಾರಿಗಳು ಹಿಂದು ಮುಂದು ನೋಡಬೇಡಿ. ನಮ್ಮ ಜಿಲ್ಲೆಯಲ್ಲಿ ಇದುವರೆಗೂ ಒಂದೇ ಒಂದು ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಇದು ನಮ್ಮ ಅದೃಷ್ಟ. ಈ ಅದೃಷ್ಟವನ್ನು ಉಳಿಸಿಕೊಂಡು ಹೋಗಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಲಾಕ್ಡೌನ್ ನೀತಿಯಿಂದಾಗಿ ಸಾರ್ವಜನಿಕರಿಗೆ ಮನೆಯಲ್ಲಿ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಅದರಲ್ಲೂ ಕೂಲಿ ಕೆಲಸಗಾರರು, ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಕಡುಬಡವರು, ನಿರ್ಗತಿಕರು, ಮತಿಭ್ರಮಣೆಗೆ ಒಳಗಾಗದವರ ಬಗ್ಗೆ ಮಾನವೀಯತೆಯ ನೆಲೆಯಲ್ಲಿ ಸೂಕ್ತ ರಕ್ಷಣೆಯೆ ಜೊತೆಗೆ ಅಗತ್ಯ ಸೇವೆ ಕಲ್ಪಿಸಿಕೊಡುವಲ್ಲಿ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು ಎಂದರು.
ನಂತರ ಹೊರ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಬರುವವರ ವಿವರಗಳನ್ನು ಪರಿಶೀಲಿಸಿ ಹೋಮ್ಕ್ವಾರಂಟೈನ್ ಬಗ್ಗೆ ಹಾಗೂ ಹೊರಗೆ ತಿರುಗಾಟ ನಡೆಸದಂತೆ ಎಚ್ಚರ ವಹಿಸುವಂತೆ ಹೇಳಿದರು. ತಾಲ್ಲೂಕಿನಲ್ಲಿ ಯಾವುದೇ ಸುಸಜ್ಜಿತ ನರ್ಸಿಂಗ್ ಹೋಮ್ ಇಲ್ಲದೆ ಇರುವುದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಇನ್ನೂ ಹೆಚ್ಚಿನ ವ್ಯವಸ್ಥೆ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಗಮನಹರಿಸುವುದಾಗಿ ಅವರು ಹೇಳಿದರು. ಕಾಫಿ ತೊಟಗಳ ಕಾರ್ಮಿಕರ ಬಗ್ಗೆ ಮಾತನಾಡಿದ ಅವರು ಕಾಫಿ ತೊಟದ ಕಾರ್ಮಿಕರುಗಳು ತಮ್ಮ ಸಮೀಪದ ತೋಟಗಳಲ್ಲಿ ಕೆಲಸ ನಿರ್ವಹಿಸಲು ಯಾವುದೇ ಕಟ್ಟುಪಾಡುಗಳಿಲ್ಲ. ಆದರೆ ಕೆಲಸ ಮಾಡುವಾಗ ಪರಸ್ಪರ ಅಂತರ ಕಾಯ್ದುಕೊಂಡು, ಜವಾಬ್ದಾರಿಯುತ ಕ್ರಮಗಳನ್ನು ಎಲ್ಲರೂ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.









