ಮೂಡಿಗೆರೆ : ಬಣಕಲ್ ಗ್ರಾ.ಪಂ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಶಾಮಿಯಾನ, ಚೇರಿನ ವ್ಯವಸ್ಥೆ…

390
firstsuddi

ಮೂಡಿಗೆರೆ : ದೇಶಾದ್ಯಂತ ವ್ಯಾಪಕವಾಗಿ ಹರಡಿ ಭೀತಿ ಹೆಚ್ಚಿಸುತ್ತಿರುವ ಮಹಾಮಾರಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಸರ್ಕಾರ ಬಯೊಮೆಟ್ರಿಕ್ ಬದಲು ಒಟಿಪಿ ವಿಧಾನದಿಂದ ಪಡಿತರ ವಿತರಿಸುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಒಟಿಪಿ ಬರುವುದು ತಡವಾಗುತ್ತಿದ್ದು ಇದರಿಂದ ಪಡಿತರದಾರರು ಗಂಟೆಗಟ್ಟಲೆ ಕಾಯುವಂತಾಗಿದೆ. ಜೊತಗೆ ಕರೊನಾ ಹರಡದಂತಿರಲು ಅಂತರ ಕಾಪಾಡಿಕೊಳ್ಳಬೇಕಾಗಿರುವುದರಿಂದ ನ್ಯಾಯಬೆಲೆ ಅಂಗಡಿಯ ಮುಂದೆ ದೂರ ದೂರ ನಿಂತು ಪಡಿತರ ಪಡೆಯಬೇಕಾಗಿದೆ. ಆದರೆ ಬಿರುಬಿಸಿಲಿನ ಕಾರಣದಿಂದ ನ್ಯಾಯಬೆಲೆ ಅಂಗಡಿಯ ಮುಂದೆ ಬಿರುಬಿಸಿಲಿನಲ್ಲಿ ನಿಂತು ಪಡಿತರ ಪಡೆಯಲು ಪಡುತ್ತಿರುವ ಕಷ್ಟವನ್ನು ಅರಿತ ಬಣಕಲ್ ಗ್ರಾ.ಪಂ ವ್ಯಾಪ್ತಿಯ 2 ನ್ಯಾಯಬೆಲೆ ಅಂಗಡಿಗಳಲ್ಲಿ ಶಾಮಿಯಾನ ಮತ್ತು ಚೇರಿನ ವ್ಯವಸ್ಥೆ ಕಲ್ಪಿಸಿದೆ.
ಈ ಕುರಿತು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಅವರು ಸಾರ್ವಜನಿಕರು ಕೊರೊನಾ ಭೀತಿ ಹಿನ್ನಲೆಯಲ್ಲಿ ಅಂತರ ಕಾಪಾಡಿಕೊಳ್ಳಲು ಸಿದ್ದರಿದ್ದಾರೆ. ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಬಿರುಬಿಸಿಲಿನ ಕಾರಣದಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಸಾದ್ಯವಾಗದೆ ಇರುವುದರಿಂದ ಅವರ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಶಾಮಿಯಾನ ಮತ್ತು ಚೇರಿನ ವ್ಯವಸ್ಥೆ ಕಲ್ಪಿಸಿದ್ದು, ಈಗಾ ಎಲ್ಲಾ ಪಡಿತರದಾರರು ಅಂತರ ಕಾಯ್ದುಕೊಂಡು ಪಡಿತರ ಪಡೆಯುತ್ತಿದ್ದಾರೆ ಎಂದರು.