ನವದೆಹಲಿ: ಕೊರೊನಾ ವೈರಸ್ ದಾಳಿಯ ಹಿನ್ನೆಲೆಯಲ್ಲಿ ದೇಶದಲ್ಲಿ ಹೇರಲಾಗಿದ್ದ 21 ದಿನಗಳ ಲಾಕ್‌ಡೌನ್ ಅವಧಿ ಮುಕ್ತಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು. ಲಾಕ್‌ಡೌನ್ ಅವಧಿಯಲ್ಲಿ ದೇಶ ತೋರಿದ ಸಂಯಮ ಹಾಗೂ ಪ್ರಬುದ್ಧತೆಯನ್ನು ಕೊಂಡಾಡಿದ ಪ್ರಧಾನಿ ಮೋದಿ ಅವರು, ನಮ್ಮ ಒಗ್ಗಟ್ಟಿನ ಪ್ರದರ್ಶನ ಕಂಡು ಇಡೀ ವಿಶ್ವವೇ ಬೆರಗಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಲಾಕ್ ಸಮಯದಲ್ಲಿ ನಾವು ತೋರಿದ ಒಗ್ಗಟ್ಟು ಪ್ರದರ್ಶನದಿಂದಾಗಿ, ದೇಶ ಕೊರೊನಾ ವೈರಸ್ ವಿರುದ್ಧದ ಸಮರದಲ್ಲಿ ವಿಜಯದತ್ತ ಹೆಜ್ಜೆಯಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಪ್ರಧಾನಿ ಮೋದಿ ಅವರು ಈ ವೇಳೆ ವಿಶ್ವಾಸ ವ್ಯಕ್ತಪಡಿಸಿದರು. ಎಲ್ಲಾ ಸಂಕಷ್ಟಗಳನ್ನೂ ಮೀರಿ ದೇಶದ ಜನತೆ ಲಾಕ್‌ಡೌನ್ ಯಶಸ್ವಿಗೊಳಿಸಿರುವುದಕ್ಕೆ ನಾನು ದೇಶವಾಸಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು. ಇದೇ ಕಾರಣಕ್ಕೆ ಲಾಕ್‌ಡೌನ್‌ನ್ನು ಮೇ.3ರವೆರೆಗೆ ವಿಸ್ತರಿಸುವ ನಿರ್ಣಯ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದರು. ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೋದಿ ಅವರು ಸ್ಪಷ್ಟಪಡಿಸಿದರು.










