ಚಿಕ್ಕಮಗಳೂರು : ಲಾಕ್ಡೌನ್ ನಿರ್ಬಂಧದಿಂದಾಗಿ ಬೆಳೆನಷ್ಠ ಅನುಭವಿಸುತ್ತಿರುವ ರೈತರ ಸಾಲವನ್ನು ರಾಜ್ಯ ಸರ್ಕಾರ ಸಂಪೂರ್ಣ ಮನ್ನಾ ಮಾಡಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಒತ್ತಾಯಿಸಿದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಳೆನಷ್ಟ ಅನುಭವಿಸಿರುವ ತಾಲೂಕಿನ ಮಲ್ಲೇನಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿನೀಡಿ ಪರಿಶೀಲನೆ ನಡೆಸಿ ನಂತರ ಅವರು ಮಾತನಾಡಿದರು.
ಲಾಕ್ಡೌನ್ ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು, ರೈತರು ಮತ್ತು ಬೆಳೆಗಾರರ ಬದುಕನ್ನು ಮೂರಾಬಟ್ಟೆಯಾಗಿಸಿದೆ. ಸಾಲಸೂಲ ಮಾಡಿ ಬೆಳೆದಿರುವ ಬೆಳೆಯನ್ನು ನಗರಕ್ಕೆ ತಂದು ಮಾರಾಟ ಮಾಡಲಾಗದೇ ಅಥವಾ ಗ್ರಾಮಗಳಿಗೆ ತೆರಳಿ ಕೊಳ್ಳುವವರಿಲ್ಲದೇ ರೈತರು ಕಂಗಾಲಾಗಿದ್ದಾರೆ. ಅವರು ಬೆಳೆದ ಬೆಳೆ ಹೊಲದಲ್ಲೇ ಮಣ್ಣು ಪಾಲಾಗುತ್ತಿದೆ ಇದರಿಂದಾಗಿ ಆರ್ಥಿಕವಾಗಿ ಅವರು ಸಂಕಷ್ಟದಲ್ಲಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣ ಕೃಷಿ ಇಲಾಖೆ ಅಧಿಕಾರಿಗಳಿಂದ ಬೆಳೆ ನಷ್ಟದ ಸಮೀಕ್ಷೆ ನಡೆಸಬೇಕು. ಬೆಳೆನಷ್ಟ ಅನುಭವಿಸಿರುವ ರೈತರಿಗೆ ನಷ್ಟವನ್ನು ತುಂಬಿಕೊಡಬೇಕು. ಅವರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದ ಅವರು, ರಾಜ್ಯ ಸರ್ಕಾರ ತಕ್ಷಣ ನೆರವಿಗೆ ಬಾರದಿದ್ದಲ್ಲಿ ರೈತರ ಸರಣಿ ಆತ್ಮಹತ್ಯೆಗಳು ಆರಂಭವಾಗುತ್ತವೆ ಎಂದು ಎಚ್ಚರಿಸಿದರು.
ಮಲ್ಲೇನಹಳ್ಳಿ ಗ್ರಾಪಂ ವ್ಯಾಪ್ತಿಯ ಭಕ್ತರಹಳ್ಳಿ, ದೇವರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿನೀಡಿ ಬೆಳೆನಾಶ ವಿಕ್ಷೀಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಭಕ್ತರಹಳ್ಳಿಯ ರೈತ ಮುಸ್ತಾಕ್ ಅಹಮದ್ ತಾವು ಕೈಸಾಲಮಾಡಿ ಎರಡು ಎಕರೆ ಪ್ರದೇಶದಲ್ಲಿ ಎಲೆಕೋಸು ಹಾಗೂ ಮುಕ್ಕಾಲು ಎಕರೆ ಭೂಮಿಯಲ್ಲಿ ಬೀನ್ಸ್ ಬೆಳೆದಿದ್ದು ಕೊಳ್ಳುವರಿಲ್ಲದೇ ಹೊಲದಲ್ಲೇ ಬೆಳೆನಾಶವಾಗುತ್ತಿದೆ ಎಂದು ಅಳಲು ತೋಡಿಕೊಂಡರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಲಾಕ್ಡೌನ್ ನಿರ್ಬಂಧದಿಂದಾಗಿ ಬೆಳೆನಷ್ಠ ಅನುಭವಿಸುತ್ತಿರುವ ರೈತರ ಸಾಲವನ್ನು ರಾಜ್ಯ ಸರ್ಕಾರ ಸಂಪೂರ್ಣ ಮನ್ನಾ...










