ಚಿಕ್ಕಮಗಳೂರು : ತೇಗೂರು ಗ್ರಾಮ ಪಂಚಾಯಿತಿ ವತಿಯಿಂದ ಕೊರೊನಾ ವಾರಿಯರ್ಸ್‍ಗೆ ಸನ್ಮಾನ…

322
firstsuddi

ಚಿಕ್ಕಮಗಳೂರು : ತಾಲ್ಲೂಕಿನ ತೇಗೂರು ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯ ಗ್ರಾಮಗಳಲ್ಲಿ ಕೊರೋನಾ ವೈರಸ್ ತಡೆಗಟ್ಟಲು ಶ್ರಮಿಸುತ್ತಿರುವ ಪೋಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರನ್ನು ಇಂದು ಗೌರವಿಸಿತು.
ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಆಶಾ ಕಾರ್ಯಕರ್ತೆಯರು, ಪೋಲೀಸರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕಿಯರನ್ನು ಸನ್ಮಾನಿಸುವುದರ ಜೊತೆಗೆ ಅವರಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು.
ಇದೇ ವೇಳೆ ಗ್ರಾಮ ಪಂಚಾಯಿತಿ ನಿಧಿಯಿಂದ 1 ಲಕ್ಷ 20 ಸಾವಿರ ರೂ ಮೌಲ್ಯದ ಮಾಸ್ಕ್‍ಗಳನ್ನು ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ವಿತರಿಸಲು ಆರೋಗ್ಯ ಕಾರ್ಯಕರ್ತರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ.ಅಧ್ಯಕ್ಷೆ ನೇತ್ರಾವತಿ ದೇವರಾಜ ಅರಸ್ ಕೊರೋನಾ ವೈರಸ್ ವಿರುದ್ದ ಸೈನಿಕರಂತೆ ಹಗಲು ರಾತ್ರಿಯೆನ್ನದೇ ಹೋರಾಟ ನಡೆಸುತ್ತಿರುವ ಆರೋಗ್ಯ ಕಾರ್ಯಕರ್ತರು ಮತ್ತು ಪೋಲೀಸ್ ಸಿಬ್ಬಂದಿಗಳ ಸೇವೆ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಿರಿಯ ಆರೋಗ್ಯ ಸಹಾಯಕಿ ವಸಂತ ಕುಮಾರಿ ಕೊರೋನಾ ವೈರಸ್ ತಡೆಗಟ್ಟಲು ತೇಗೂರು ಗ್ರಾಮ ಪಂಚಾಯಿತಿ ಆರೋಗ್ಯ ಕಾರ್ಯಕರ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡಿ ಪ್ರೋತ್ಸಾಹಿಸಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಹರೀಶ್, ಶಾಂತಕುಮಾರ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕೆ.ಆರ್.ಲಾಸ್ಯ ಹಾಜರಿದ್ದರು.