ಮೂಡಿಗೆರೆ : ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಕೊನೆಗೊಳ್ಳಬೇಕಾದ ಕಾಫಿ ತೋಟದ ಕೆಲಸ ಲಾಕ್ಡೌನ್ನಿಂದಾಗಿ ಕಾರ್ಮಿಕರ ಸಮಸ್ಯೆಯಿಂದ ಹಾಗೆಯೆ ಉಳಿದಿದೆ. ಕಟಾವು ಆಗಿರುವ ಕಾಫಿ, ಕಾಳುಮೆಣಸು ಖರೀದಿದಾರರಿಲ್ಲದೇ ಮಾರಾಟ ಮಾಡಲು ಸಾಧ್ಯವಾಗಿಲ್ಲ. ಪ್ರವಾಸೋದ್ಯಮ ಕ್ಷೇತ್ರಕ್ಕೂ ಸಂಚಕಾರ ಬಂದಿದ್ದರಿಂದ ಕಾಫಿ ಬೆಳೆಗಾರರ ಸಂಕಷ್ಟ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕರ್ನಾಟಕ ಬೆಳೆಗಾರ ಸಂಘದ ಮಾಜಿ ರಾಜ್ಯಾಧ್ಯಕ್ಷ ಬಿ.ಎಸ್.ಜಯರಾಂ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ಸಾಂ, ತಮಿಳುನಾಡು ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ಪ್ರತಿ ವರ್ಷ ಮಲೆನಾಡಿನ ಕಾಫಿ ತೋಟಕ್ಕೆ ಕೂಲಿ ಕಾರ್ಮಿಕರು ವಲಸೆ ಬರುತ್ತಿದ್ದರು. ಈ ಬಾರಿ ಕೆಲವೇ ಕೆಲವು ತೋಟಗಳಿಗೆ ಮಾತ್ರ ಬಂದಿದ್ದಾರೆ. ಇಲ್ಲಿಗೆ ಬರುವ ಕಾರ್ಮಿಕರು ಕ್ವಾರಂಟೈನ್ನಲ್ಲಿರಬೇಕಾಗಿದ್ದರಿಂದ ಯಾವ ಕಾರ್ಮಿಕರು ಇತ್ತ ಸುಳಿಯುತ್ತಿಲ್ಲ. ಇದರಿಂದ ಕಾಫಿ ತೋಟದ ಕೆಲಸಗಳು ಕಾರ್ಮಿಕರಿಲ್ಲದೆ ಸ್ಥಗಿತಗೊಂಡಿದೆ. ಲಾಕ್ಡೌನ್ ವೇಳೆ ಕಾಡಾನೆ ಸಹಿತ ಇತರೇ ಕಾಡು ಪ್ರಾಣಿಗಳು ಕಾಫಿ ತೋಟಕ್ಕೆ ಲಗ್ಗೆ ಇಟ್ಟಿದ್ದರಿಂದ ಬೆಳೆಗಳು ದ್ವಂಸಗೊಂಡಿದೆ. ಅದಕ್ಕಾಗಿ ಅರಣ್ಯ ಇಲಾಖೆ ವಿದೇಶದಲ್ಲಿದ್ದಂತೆ ಟೆಂಟೆಕಲ್ ಪೆನ್ಸಿಂಗ್ ಬೇಲಿಯನ್ನು ಕುಂದೂರು ಭಾಗದ ಮೀಸಲು ಅರಣ್ಯದಲ್ಲಿ 10 ಕಿ,ಮೀ ಪ್ರಾಯೋಗಿಕವಾಗಿ ನಿರ್ಮಿಸಲಾಗಿದೆ. ಇದು ಕಾಡಾನೆ ಮತ್ತು ಕಾಡು ಪ್ರಾಣಿಗಳನ್ನು ತಡೆಯಲು ಸಾಧ್ಯವಿದೆ ಎಂದು ತಿಳಿಸಿದರು.
ಬೆಳೆಗಾರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಅವರು ಮಾತನಾಡಿ, ಕೋವಿಡ್-19 ಕಾರಣದಿಂದ ಕಳೆದ 4 ತಿಂಗಳಿಂದ ಹೋಂ ಸ್ಟೇ, ರಸಾರ್ಟ್ ಸಹಿತ ಪ್ರವಾಸೋದ್ಯಮ ಕ್ಷೇತ್ರ ಸ್ಥಗಿತಗೊಂಡಿದೆ. ಇದು ಬೆಳೆಗಾರರಿಗೆ ನುಂಗಲಾರದ ತುತ್ತಾಗಿದೆ. ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ನೂತನ ಪ್ರವಾಸೋದ್ಯಮ ನೀತಿ ರೂಪಿಸಿಲು ಸದ್ಯದಲ್ಲೇ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಹೊಸ ಕರಡು ನೀತಿಗೆ ಸೇರ್ಪಡೆಗೊಳಿಸಲು ಬೆಳೆಗಾರ ಸಂಘದಿಂದ 13 ಸೂತ್ರವನ್ನು ತಯಾರಿಸಿ ಸಚಿವರಿಗೆ ನೀಡಿದೆ ಎಂದ ಅವರು, ಕೇಂದ್ರ ಸರಕಾರ ಕೃಷಿ ಭೂಮಿಯನ್ನು ಹೊರಗಿಟ್ಟು ಒತ್ತುವರಿ ನೀತಿಗೆ ಸುಗ್ರಿವಾಜ್ಞೆ ತಂದಿದೆ. ಇದು ರೈತರಿಗೆ ಅನುಕೂಲವಾಗಲಿದೆ. ಫಾಂ 53 ಮತ್ತು 57 ರಲ್ಲಿ ರೈತರಿಗೆ ಹೆಚ್ಚು ಜಮೀನು ಮಂಜೂರುಗೊಳಿಸಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಕಸಾಪ ಮಾಜಿ ಅಧ್ಯಕ್ಷ ಎಂ.ಎಸ್.ಅಶೋಕ್ ಮಾತನಾಡಿದರು. ಗೋಷ್ಠಿಯಲ್ಲಿ ತಾಲೂಕು ಬೆಳೆಗಾರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಡಿ.ಮನೋಹರ್, ಖಜಾಂಚಿ ದೇವರಾಜು, ಕಸಾಪ ಮಾಜಿ ಅಧ್ಯಕ್ಷ ಎಂ.ಎಸ್.ಅಶೋಕ್ ಉಪಸ್ಥಿತರಿದ್ದರು.










