ಚಿಕ್ಕಮಗಳೂರು : ಡಾ|| ಬಿ.ಆರ್.ಅಂಬೇಡ್ಕರ್ ಅವರ ನಿವಾಸದ ಮೇಲೆ ದಾಳಿ ನಡೆಸಿದವರನ್ನು ಬಂಧಿಸುವಂತೆ ಬಿಎಸ್‍ಪಿ ಪಕ್ಷದ ವತಿಯಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯ…

241
firstsuddi

ಚಿಕ್ಕಮಗಳೂರು : ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರ ನಿವಾಸದ ಮೇಲೆ ದಾಳಿ ನಡೆಸಿರುವವರನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಜಿಲ್ಲಾ ಬಹುಜನ ಸಮಾಜಪಕ್ಷ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿ ಡಾ|| ಕುಮಾರ್ ಅವರನ್ನು ಇಂದು ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಶತಶತಮಾನಗಳ ಕಾಲ ಕತ್ತಲೆಯ ಕೂಪದಲ್ಲಿದ್ದ ದೇಶಕ್ಕೆ ಸಂವಿಧಾನದ ಮೂಲಕ ಬೆಳಕು ನೀಡಿದ ಅಂಬೇಡ್ಕರ್ ಅವರ ಮುಂಬೈನ ರಾಜಗೃಹದ ಮೇಲೆ ಮನುವಾದಿಗಳು ನಡೆಸಿರುವ ದಾಳಿ ಅತ್ಯಂತ ಖಂಡನೀಯ ಎಂದು ತಿಳಿಸಿದರು.
ಬಾಬಾ ಸಾಹೇಬರ ಮೇಲಿನ ಮನುವಾದಿಗಳ ದ್ವೇಷಕ್ಕೆ ದಶಕಗಳ ಇತಿಹಾಸವಿದೆ, ಅವರ ಪ್ರತಿಮೆಗಳನ್ನು ಧ್ವಂಸಗೊಳಿಸುವುದು, ಭಾವಚಿತ್ರವನ್ನು ವಿರೂಪಗೊಳಿಸುವುದು ದೇಶದಲ್ಲಿ ನಿರಂತರವಾಗಿ ನಡೆಯುತ್ತಲೇ ಬಂದಿದೆ, ಇತ್ತೀಚೆಗೆ ಸಂಸತ್ ಭವನ ಸಮೀಪದ ಜಂತರ್ ಮಂತರ್‍ನಲ್ಲಿ ಸಂವಿಧಾನದ ಪ್ರತಿಗಳನ್ನು ಸುಟ್ಟುಹಾಕಲಾಯಿತು. ಬಾಬಾ ಸಾಹೇಬರು ಆರಂಭಿಸಿದ್ದ ಪ್ರಬುದ್ದ ಭಾರತ ಪತ್ರಿಕೆಯ ಮುದ್ರಣಾಲಯವನ್ನು ಧ್ವಂಸಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಇದುವರೆಗೆ ನಡೆದಿರುವ ದಾಳಿ ಪ್ರಕರಣಗಳ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸದೇ ಇರುವುದು ಅಂಬೇಡ್ಕರ್ ಅವರ ನಿವಾಸದ ಮೇಲಿನ ದಾಳಿಗೆ ಪ್ರೇರಣೆಯಾಗಿದೆ, ಮನೆಯ ಮೇಲಿನ ದಾಳಿಯಿಂದಾಗಿ ಬಾಬಾ ಸಾಹೇಬರ ಕುಟುಂಬದ ಸದಸ್ಯರು ಪ್ರಾಣಭೀತಿಯಲ್ಲಿ ಬದುಕುವಂತಾಗಿದೆ ಎಂದರು.
ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ದಾಳಿಯ ಆರೋಪಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು, ಅಂಬೇಡ್ಕರ್ ಅವರ ಕುಟುಂಬದ ಸದಸ್ಯರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ರಾಜ್ಯ ಕಾರ್ಯದರ್ಶಿ ಪಿ.ಪರಮೇಶ್ವರ, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಕೆ.ಬಿ.ಸುಧಾ, ಸವಿತ, ಕೆ.ಎಸ್.ಮಂಜುಳಾ, ವಸಂತ, ಗಿರೀಶ್ ಹಾಜರಿದ್ದರು.