ಚಿಕ್ಕಮಗಳೂರು : ಶ್ರಾವಣ ಸಂಜೆ ಕಾರ್ಯಕ್ರಮಗಳು ಆಧ್ಯಾತ್ಮಿಕ ಅರಿವಿಗೆ ಸಹಕಾರಿ : ಕುಂದೂರು ಅಶೋಕ್.

204
firstsuddi

ಚಿಕ್ಕಮಗಳೂರು : ಶ್ರಾವಣ ಸಂಜೆ ಕಾರ್ಯಕ್ರಮಗಳು ಆಧ್ಯಾತ್ಮಿಕ ಅರಿವಿಗೆ ಸಹಕಾರಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಹೇಳಿದರು.
ನಗರದ ಕಲ್ಯಾಣನಗರದ ವಿನಯ್ ನಿಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶ್ರವಣ ಎಂದರೆ ಕೇಳುವುದು ಹಾಗಾಗಿ ಶ್ರಾವಣ ಮಾಸದಲ್ಲಿ ಎಲ್ಲೆಡೆ ಶ್ರಾವಣ ಸಂಜೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ, ಆ ಕಾರ್ಯಕ್ರಮಗಳಲ್ಲಿ ಆಧ್ಯಾತ್ಮಿಕ ಪ್ರವಚನಗಳನ್ನು ವಿಚಾರ ಧಾರೆಗಳನ್ನು ಮಂಡಿಸಲಾಗುತ್ತದೆ, ಅವುಗಳಲ್ಲಿ ಪಾಲ್ಗೊಂಡರೆ ನಾವು ಆಧ್ಯಾತ್ಮಿಕವಾಗಿ ಮುಂದುವರೆಯಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಶ್ ಬಸಪ್ಪ ಸಾರ್ವಜನಿಕರಲ್ಲಿ ಆಧ್ಯಾತ್ಮದ ಅರಿವನ್ನು ಮೂಡಿಸುವುದರ ಜೊತೆಗೆ ಅವರಲ್ಲಿ ವೈಚಾರಿಕತೆಯನ್ನು ಬೆಳೆಸುವ ಉದ್ದೇಶದಿಂದ ಪ್ರತಿವರ್ಷ ಶ್ರಾವಣ ಸಂಜೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಬಿಸಲೇಹಳ್ಳಿ ಸೋಮಶೇಖರ್ ಅವರನ್ನು ಶರಣ ಸಾಹಿತ್ಯ ಪರಷತ್ ವತಿಯಿಂದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಿಸಲೇಹಳ್ಳಿ ಸೋಮಶೇಖರ್ ಇದುವರೆಗೆ ನಾಟಕಗಳಲ್ಲಿ ತಾವು ಅಭಿನಯಿಸಿರುವ ಪಾತ್ರಗಳು ತಮಗೆ ಅತ್ಯಂತ ತೃಪ್ತಿ ತಂದಿವೆ ಎಂದು ಹೇಳಿದರು.
ನಿವೃತ್ತ ಮುಖ್ಯಶಿಕ್ಷಕ ಎಸ್.ಎನ್.ಮಲ್ಲೇಶಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಚಾಲಕ ಡಿ.ಎಂ.ಮಂಜುನಾಥಸ್ವಾಮಿ, ಕಾರ್ಯದರ್ಶಿಗಳಾದ ಪ್ರಭು ಸೂರಿ, ಮಂಜುನಾಥ್, ಖಜಾಂಚಿ ಸೋಮಶೇಖರ್, ತಾಲ್ಲೂಕು ಅಧ್ಯಕ್ಷ ಲೋಕೇಶಪ್ಪ, ನಿವೃತ್ತ ಡಿಡಿಪಿಐ ದೊಡ್ಡಮಲ್ಲಪ್ಪ, ಸಾಹಿತಿ ಬಾಣೂರು ಚೆನ್ನಪ್ಪ ಉಪಸ್ಥಿತರಿದ್ದರು.