ಚಾಮರಾಜನಗರ : ಪೋಷಕರು ಆನ್ಲೈನ್ ತರಗತಿಗೆ ಮೊಬೈಲ್ ಕೊಡಿಸಲಿಲ್ಲ ಎಂದು ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಸಗಡೆ ಗ್ರಾಮದಲ್ಲಿ ನಡೆದಿದೆ. ಹರ್ಷಿತಾ(15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಎಂದು ಗುರುತಿಸಲಾಗಿದೆ. ದೇಶಾದ್ಯಂತ ಕೊರೊನಾ ಭೀತಿ ಇರುವ ಹಿನ್ನೆಲೆ, ಶಾಲಾ ಮಕ್ಕಳಿಗೆ ಆನ್ಲೈನ್ ತರಗತಿಯನ್ನು ನಡೆಸಲಾಗುತ್ತಿದ್ದು, ಇದರಿಂದ ಬಾಲಕಿ ಆನ್ಲೈನ್ ತರಗತಿಗೆ ಮೊಬೈಲ್ ಕೊಡಿಸಿ ಎಂದು ತನ್ನ ಪೋಷಕರಲ್ಲಿ ಕೇಳಿಕೊಂಡಿದ್ದಾರೆ. ಆದರೆ ವೃತ್ತಿಯಲ್ಲಿ ಟೈಲರ್ ಆಗಿರುವ ಬಾಲಕಿಯ ತಂದೆ ರಾಜೇಶ್ ಅವರು ಯಾವುದಾದರು ಹಣ ಸಿಕ್ಕಾಗ ಕೊಡಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಮನನೊಂದ ಬಾಲಕಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










