ಕೊಟ್ಟಿಗೆಹಾರ : ಯುವ ಪೀಳಿಗೆಯ ಮೇಲೆ ತೇಜಸ್ವಿ ಅವರ ಪ್ರಭಾವ ಅಪಾರವಾಗಿದ್ದು ತೇಜಸ್ವಿ ಅವರನ್ನು ಓದಿಕೊಂಡ ಅಭಿಮಾನಿ ಓದುಗ ಬಳಗ ದೊಡ್ಡದು ಎಂದು ಅಬಚೂರು ಮಿತ್ರವೃಂದದ ವಿನೋದ್‍ಕುಮಾರ್ ಹೇಳಿದರು.
ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಟಾನದಲ್ಲಿ ಬುಕ್‍ಪೋಸ್ಟ್ ಕಥಾ ಸಂಕಲನ ಬಿಡುಗಡೆ ಮತ್ತು ತೇಜಸ್ವಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನವರಿ ತಿಂಗಳಲ್ಲಿ ಕಥಾ ಸ್ಪರ್ದೆಗೆ ಕಥೆಗಳನ್ನು ಆಹ್ವಾನಿಸಲಾಗಿತ್ತು. ಬಂದ ಕಥೆಗಳಲ್ಲಿ 13 ಕಥೆಗಳನ್ನು ಆಯ್ಕೆ ಮಾಡಿ ಅದರಲ್ಲಿ ಮೂರು ಕಥೆಗಳಿಗೆ ಬಹುಮಾನ ನೀಡಲಾಗಿದೆ. 13 ಕಥೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದ್ದು ಮಲೆನಾಡು, ಶಿಕಾರಿ, ಅಬಕಾರಿ ತರ್ಲೆಗಳು, ಇವೆಲ್ಲದರ ಜೊತೆಗೆ ಹಲವು ವೈವಿಧ್ಯಮಯವಾದ ಗಂಭೀರ ಹಾಗೂ ಹಾಸ್ಯಮಯ ಕಥೆಗಳು ಈ ಕೃತಿಯಲ್ಲಿವೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ. ರಮೇಶ್ ಮಾತನಾಡಿ ತೇಜಸ್ವಿ ಪ್ರತಿಷ್ಟಾನವು ಸಾಹಿತ್ಯ ಕಾರ್ಯಕ್ರಮಗಳ ಜೊತೆಗೆ ಚಾರಣ, ಪೋಟೋಗ್ರಫಿ, ಪಕ್ಷಿವೀಕ್ಷಣೆಯಂತಹ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ತೇಜಸ್ವಿ ಚಿಂತನೆಗಳ ಸಾಕಾರಕ್ಕೆ ಪ್ರತಿಷ್ಟಾನವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ತೇಜಸ್ವಿ ಒಡನಾಡಿ ರಾಘವೇಂದ್ರ ಮಾತನಾಡಿ, ತೇಜಸ್ವಿ ಅವರ ಉದ್ದೇಶ ಪುಸ್ತಕಗಳು ಓದುಗರನ್ನು ತಲುಪಬೇಕು ಎಂಬುದಾಗಿತ್ತು. ಅದಕ್ಕಾಗಿ ಅವರು ಪುಸ್ತಕ ಪ್ರಕಾಶನ, ಬುಕ್‍ಪೋಸ್ಟ್ ಸೇವೆ ಆರಂಭಿಸಿದರು. ಪುಸ್ತಕ ಬಿಡುಗಡೆಯಾದಷ್ಟೇ ಅದರ ಮಾರುಕಟ್ಟೆಯ ಕಡೆಯೂ ಗಮನ ಹರಿಸಬೇಕು. ಅದು ಹೆಚ್ಚು ಹೆಚ್ಚು ಜನರನ್ನು ತಲುಪಿ ಜನರಿಂದ ಓದಿಸಿಕೊಳ್ಳಬೇಕು. ಓದುಗರ ಮೆಚ್ಚುಗೆಗಿಂತ ದೊಡ್ಡ ಪ್ರಶಸ್ತಿ ಇಲ್ಲ ಎಂಬುದು ತೇಜಸ್ವಿ ಅಭಿಪ್ರಾಯವಾಗಿತ್ತು ಎಂದರು.
ಮಂಡ್ಯದ ಜಿಲ್ಲಾ ಉದ್ಯೋಗಾಧಿಕಾರಿ ವೇಣುಗೋಪಾಲ್, ಅಬಚೂರು ಮಿತ್ರವೃಂಧದ ಡಾ. ಜಗದೀಶ್, ಡಾ.ಶಿವಪ್ರಸಾದ್, ನಿಶಾಂತ್, ನಿರ್ವಾಣೇಗೌಡ, ತೇಜಸ್ವಿ ಪ್ರತಿಷ್ಟಾನದ ಆಕಾರ್ಶ್, ಸತೀಶ್, ಸಾಹಿತ್ಯಾಸಕ್ತರಾದ ಪೂರ್ಣೆಶ್ ಮತ್ತಾವರ, ಸಂಪತ್ ಸಿರಿಮನೆ ಕೊಪ್ಪ, ನಾಗರಾಜ್ ಕೂವೆ, ಕಥಾ ಸ್ಪರ್ದೆಯ ವಿಜೇತರಾದ ಯಶಸ್ವಿನಿ ಕದ್ರಿ ಮಂಗಳೂರು, ಮಂಜುನಾಥ್ ಕುಂದಾಪುರ, ಇದ್ದರು.










