ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ
ಮೈಸೂರು: ಕೃಷಿ ಹೊಂಡಕ್ಕೆ ಬಿದ್ದು ಮೂವರು ಪುಟ್ಟ ಕಂದಮ್ಮಗಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ನರಸೀಪುರ ತಾಲ್ಲೂಕಿನ ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಗೆ ಸಮೀಪದ ನಾಗಲಾಪುರ ತಾಂಡಾದಿಂದ ಹೊಟ್ಟೆಪಾಡಿಗಾಗಿ ಗುಳೆ ಹೋದ ಲಂಬಾಣಿ ಕುಟುಂಬಗಳ ಮೂರು ಮಕ್ಕಳಾದ ನಾಗಲಾಪುರ ತಾಂಡಾದ ರವಿನಾಯ್ಕ ಎಂಬುವರ ಮೂರು ವರ್ಷದ ಮಗ ರೋಹಿತ್, ರವಿನಾಯ್ಕ್ ರ ಸಹೋದರ ಅಮರೇಶ್ ನಾಯ್ಕರ ನಾಲ್ಕು ವರ್ಷದ ಮಗಳು ಕಾವೇರಿ ಹಾಗೂ ಸಹೋದರಿ ಗಂಗೀಬಾಯಿ ಎಂಬುವರ ಮೂರು ವರ್ಷದ ಮಗು ಸಂಜಯ್ ಕುಮಾರ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಪೋಷಕರು ಕಬ್ಬು ಕಡಿಯುವ ಕೆಲಸದಲ್ಲಿ ತೊಡಗಿಕೊಂಡಾಗ ಈ ಮಕ್ಕಳು ಆಡುತ್ತಾ ಕೃಷಿಹೊಂಡದಲ್ಲಿ ಬಿದ್ದು ಮೃತಪಟ್ಟಿವೆ ಎಂದು ಹೇಳಲಾಗಿದ್ದು, ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಪ್ರಕ್ರಿಯೆ ಮುಂದುವರೆದಿದೆ.
ಕಳೆದ ಒಂದು ತಿಂಗಳ ಹಿಂದೆ ಹೊಸಪೇಟೆ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಅಪಾರ ಸಂಖ್ಯೆಯಲ್ಲಿ ಬಂಜಾರರ ಸಮುದಾಯದವರು ಕುಟುಂಬಸಮೇತ ಹೊಟ್ಟೆ ಪಾಡಿಗಾಗಿ ಕೆಲಸ ಅರಸಿ ಕಬ್ಬು ಕಟಾವಿಗೆ ಹೋಗಿದ್ದರು. ಮಕ್ಕಳ ಭವಿಷ್ಯಕ್ಕಾಗಿ ಜೀವದ ಹಂಗು ತೊರೆದು ದುಡಿಯುವ ಈ ಕುಟುಂಬಗಳು ತಮ್ಮ ಭವಿಷ್ಯದ ಮಕ್ಕಳನ್ನೆ ಕಳೆದುಕೊಂಡು ಈಗ ಸಂಕಟಪಡುತ್ತಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಮಾಜ ಸೇವಕ ಪೂಜಾರ್ ಪ್ರಕಾಶ್ ಅವರು ಮೃತ ಮಕ್ಕಳ ಕುಟುಂಬಕ್ಕೆ ತಲಾ 5 ಸಾವಿರ ರೂ. ಚೆಕ್ ವಿತರಿಸಿ ಸಾಂತ್ವಾನ ಹೇಳಿದ್ದಾರೆ.










