ಹೊಸಪೇಟೆ : ಬಂಜಾರರ ವಲಸೆ ಸಮಸ್ಯೆಗೆ ಸರ್ಕಾರ ಕೂಡಲೇ ಶಾಶ್ವತ ಪರಿಹಾರ ನೀಡಬೇಕೆಂದು ಬಂಜಾರ ಸಮುದಾಯದಿಂದ ಸರ್ಕಾರಕ್ಕೆ ಒತ್ತಾಯ…

244
firstsuddi

ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ

ಹೊಸಪೇಟೆ : ಬಂಜಾರರ ವಲಸೆ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಬಂಜಾರರು ಸೇರಿದಂತೆ ವಿವಿಧ ಬಡ ಸಮುದಾಯಗಳು ಜೀವನ ನಿರ್ವಹಣೆಗೆ ವಲಸೆ ಹೋಗುವುದನ್ನು ತಡೆಯಲು ಸರ್ಕಾರ ಕೂಡಲೇ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂದು ಬಂಜಾರ ಸಮುದಾಯದ ವಿವಿಧ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿವೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಅಂಕನಹಳ್ಳಿ ಗ್ರಾಮದ ಬಳಿ ಕಬ್ಬು ಕಟಾವಿಗೆಂದು ಹೋಗಿದ್ದ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಜಿ.ನಾಗಲಾಪುರ ತಾಂಡಾದ ಬಂಜಾರರ ಮೂರು ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ ಘಟನೆಯ ಹಿನ್ನಲೆಯಲ್ಲಿ ಗೋರ್ ಸೇನಾ, ಅಖಿಲ ಭಾರತೀಯ ಬಂಜಾರ ಸಂಘಟನೆಯ ರಾಜ್ಯಸಮಿತಿ, ವಿಶ್ವ ಗೋರ್ ಕಟಮಾಳೋ, ಆಲ್ ಇಂಡಿಯಾ ಬಂಜಾರಾ ಸೇವಾ ಸಂಘ, ಜಾಗೋ ಗೋರ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ನಾಗಲಾಪುರ ತಾಂಡಾಕ್ಕೆ ಭೇಟಿ ನೀಡಿ ಮೃತಮಕ್ಕಳ ಪೋಷಕರಿಗೆ ಸಾಂತ್ವನ ಹೇಳಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಂಘಟಕರು, ರಾಜ್ಯದಲ್ಲಿನ ಬಂಜಾರ ಸಮುದಾಯದವರು ಮೃತ ಮಕ್ಕಳ ಕುಟುಂಬಕ್ಕೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು. ಈ ಕುಟುಂಬಕ್ಕೆ ಸ್ವಾಭಿಮಾನದಿಂದ ಬದುಕಲು ಸರ್ಕಾರ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಈ ಸಮುದಾಯದವರು ಯಾವುದೇ ಜೀವನಭದ್ರತೆ ಇಲ್ಲದೇ ಆತಂಕದಲ್ಲಿಯೇ ಜೀವನ ದೂಡುತ್ತಿದ್ದಾರೆ. ಸ್ಥಳೀಯವಾಗಿ ಯಾವುದೇ ಆದಾಯಗಳು ಇಲ್ಲದೇ ಇರುವುದರಿಂದ ಹೊಟ್ಟೆ ಪಾಡಿಗಾಗಿ ಹೊರ ಜಿಲ್ಲೆ ಹಾಗೂ ಹೊರರಾಜ್ಯಗಳಿಗೂ ಗುಳೆ ಹೋಗುತ್ತಾರೆ. ಅಲ್ಲೆಲ್ಲಾ ನಾನಾ ರೀತಿಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಬಂಜಾರ ಸಮುದಾಯಕ್ಕೆ ಜೀವನ ಭದ್ರತೆ ಇಲ್ಲವಾದ್ದರಿಂದ ಅಸಹಜ ಸಾವು ನೋವುಗಳಿಗೆ ಒಳಗಾಗುತ್ತಾರೆ ಎಂದರು.
ಬಂಜಾರರ ಜೀವನ ರಕ್ಷಣೆಗೆ ಸರ್ಕಾರ ಕೂಡಲೇ ಮುಂದಾಗಬೇಕು. ಕೃಷಿಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಮಕ್ಕಳ ಕುಟುಂಬಕ್ಕೆ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಯವರು ತ್ವರಿತವಾಗಿ ಪರಿಹಾರ ನೀಡಬೇಕು. ಕಬ್ಬು ಕಡಿಯಲು ಮತ್ತು ಇತರೆ ಕೆಲಸ ಮಾಡಲು ವಲಸೆ ಹೋಗುವ ಕುಟುಂಬಗಳಿಗೆ ಆಯಾ ಸಂಸ್ಥೆಗಳಿಂದ ಜೀವವಿಮೆಯನ್ನು ಕುಟುಂಬದ ಎಲ್ಲಾ ಸದಸ್ಯರಿಗೆ ಕಡ್ಡಾಯವಾಗಿ ಮಾಡಿಸಬೇಕು ಎಂದು ಆಗ್ರಹಿಸಿದರು. ಅಲ್ಲದೇ ವಲಸೆ ಬಂದಂತಹ ಮಕ್ಕಳಿಗೆ ಹತ್ತಿರ ಇರುವ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಅನುವು ಮಾಡಿಕೊಡಬೇಕು ಮತ್ತು ಮಕ್ಕಳ ಕಲಿಕೆ ನಿರಂತರವಾಗಿ ಇರುವಂತೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ವಲಸೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ ವಲಸೆ ತಡೆಯಲು ಶಾಶ್ವತ ಯೋಜನೆಗಳನ್ನು ರೂಪಿಸಬೇಕು. ಸ್ಥಳೀಯವಾಗಿ ಉದ್ಯೋಗ ಮಾಡಲು ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೆ ತರಬೇಕು. ಮತ್ತು ಹೆಣ್ಣುಮಕ್ಕಳಿಗೆ ಸಣ್ಣ ಕೈಗಾರಿಕೆಗಳನ್ನು ಮಾಡಲು ನೆರವು ನೀಡಬೇಕು. ನಿರುದ್ಯೋಗಿ ಯುವಕ ಯುವತಿಯರಿಗೆ ಕೈಗಾರಿಕೆಗಳನ್ನು ಮಾಡಲು ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.
ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ನಾಗಲಾಪುರ ಗ್ರಾ.ಪಂ. ಕಾರ್ಯದರ್ಶಿ ಹಾಗೂ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಕೊಪ್ಪಳ ವಲಯದ ಪ್ರಥಮ ದರ್ಜೆ ಸಹಾಯಕ ರವಿನಾಯಕ್ ಲಮಾಣಿ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಬಂಜಾರ ಸಂಘಟನಾ ರಾಜ್ಯಸಮಿತಿಯ ಅಧ್ಯಕ್ಷ ಪುಂಡಲೀಕ್ ಜಾದವ್, ಬಂಜಾರ ಸೇವಾ ಸಂಘ ರಾಜ್ಯ ಸದಸ್ಯ ಯಮುನಾನಾಯ್ಕ, ಗೋರ್ ಸೇನಾ ರಾಜ್ಯ ಉಪಾಧ್ಯಕ್ಷ ಶಿವಪ್ಪ, ರಾಜ್ಯ ಕಾರ್ಯದರ್ಶಿ ಸುರೇಶ ಜಾಠೊತ್, ಜಿಲ್ಲಾ ಅಧ್ಯಕ್ಷ ವೆಂಕಟೇಶ ಜಾಧವ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿನಾಯ್ಕ, ಹಡಗಲಿ ತಾಲ್ಲೂಕು ಅಧ್ಯಕ್ಷ ಸೇವಾ ನಾಯ,್ಕ ವಿಶ್ವ ಗೋರ್ ಕಟಮಾಳೋ ಅಡ್ಮಿನ್ ಅಲೋಕ್ ನಾಯ್ಕ, ಆನೇಕಲ್ ತಾಂಡದ ರಾಮಚಂದ್ರ ಮಹಾರಾಜ್, ನಾಗಲಾಪುರ ಗ್ರಾ.ಪಂ ಕಾರ್ಯದರ್ಶಿ ತೋಟಯ್ಯ, ಯಂಕನಾಯ್ಕ ಶೇಖರ್ ನಾಯ್ಕ, ಕೃಷ್ಣನಾಯ್ಕ, ಮಂಜುನಾಥ, ರಾಜುನಾಯ,್ಕ ರವಿನಾಯ್ಕ ಚವ್ಹಾಣ್, ಪ್ರವೀಣ್ ರತ್ನ ಜಿ, ಉಮಾಪತಿ ನಾಯ್ಕ, ಅಮರೇಶ್ವರ ರಮೇಶ ನಾಯ್ಕ, ಹೇಮಗಿರಿ ಚಂದ್ರನಾಯ್ಕ, ಸ್ಥಳೀಯ ಮುಖಂಡರಾದ ಲೋಕ್ಯ ನಾಯ್ಕ, ಬಿ. ನಾಯಕ ತುಳಜಾ ನಾಯ್ಕ, ಮೇಘ್ಯನಾಯ್ಕ, ಸೊಮ್ಲನಾಯ್ಕ, ಪೂಮ್ಯನಾಯ್ಕ, ಭೀಮನಾಯ್ಕ, ತಿಪ್ಪಣ್ಣ, ನಾಗರಾಜ, ಹನುಮನಾಯ್ಕ, ಪೂಜಾರಿ ಹೇಮ್ಲನಾಯ್ಕ ಹಾಗೂ ಇತರರು ಇದ್ದರು.