ಬೆಂಗಳೂರು : ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಟ್ವೀಟ್ ಮೂಲಕ ಸಂತಾಪವನ್ನು ಸೂಚಿಸಿದ್ದು, ತಮ್ಮ ಅಸಾಧಾರಣ ಕಂಠಸಿರಿಯಿಂದ ವಿಶ್ವದಾದ್ಯಂತ ಸಂಗೀತಪ್ರಿಯರ ಮನೆಮನಗಳಲ್ಲಿ ಸ್ಥಾನಪಡೆದ ಗಾನಗಂಧರ್ವ, ಭಾರತದ ಹೆಮ್ಮೆ, ಪದ್ಮಭೂಷಣ ಡಾ ಎಸ್.ಪಿ.ಬಾಲಸುಬ್ರಹ್ಮಣ್ಯಂ ವಿಧಿವಶರಾಗಿರುವುದು ಇಡೀ ಭಾರತೀಯ ಕಲಾಲೋಕಕ್ಕೆ ಎಂದೂ ತುಂಬಲಾಗದ ನಷ್ಟ. ಅಕ್ಷರಗಳಲ್ಲಿ ಹಿಡಿದಿಡಲಾಗದಷ್ಟು ಸಾಧನೆ ಮಾಡಿದ್ದ ಎಸ್.ಪಿ.ಬಿ ತಮ್ಮ ಗೀತೆಗಳ ಮೂಲಕ ಅಮರರಾಗಿದ್ದಾರೆ.
‘ಮುಂದಿನ ಜನ್ಮ ಅನ್ನೋದು ಇದ್ದರೆ ಕನ್ನಡನಾಡಲ್ಲೇ ಕನ್ನಡಿಗನಾಗಿ ಹುಟ್ಟಿ ಋಣ ತೀರಿಸುವೆ’ ಎಂದು ಕನ್ನಡಿಗರ ಮೇಲಿನ ತಮ್ಮ ಪ್ರೀತಿ ಅಭಿಮಾನಗಳನ್ನು ವ್ಯಕ್ತಪಡಿಸುತ್ತಿದ್ದ ಎಸ್.ಪಿ.ಬಿ ನಿಧನಕ್ಕೆ ಇಡೀ ನಾಡು ಕಂಬನಿ ಮಿಡಿಯುತ್ತಿದೆ. ಸರಿಸಾಟಿಯಿಲ್ಲದ ಆ ಮಹಾನ್ ಗಾಯಕನ ಆತ್ಮಕ್ಕೆ ಚಿರಶಾಂತಿಯನ್ನು ಪ್ರಾರ್ಥಿಸುತ್ತೇನೆ.
ಅವರ ಕುಟುಂಬದವರಿಗೆ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಅವರ ಅಭಿಮಾನಿಗಳಲ್ಲಿ ಒಬ್ಬನಾಗಿ ಪ್ರಾರ್ಥಿಸುತ್ತಾ, ಆ ಮಹಾನ್ ಸಾಧಕನಿಗೆ ನನ್ನ ನುಡಿನಮನಗಳನ್ನು ಸಲ್ಲಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.










