ಲಕ್ನೋ : 14 ದಿನದ ಬಾಣಂತಿ ಐಎಎಸ್ ಅಧಿಕಾರಿ ತನ್ನ ಪುಟ್ಟ ಕಂದಮ್ಮನೊಂದಿಗೆ ತಮ್ಮ ಸೇವೆಗೆ ಹಾಜರಾಗಿದ್ದು, ಮಗುವಿನೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಗಾಜಿಯಾಬಾದ್ ಜಿಲ್ಲೆಯ ಕೋವಿಡ್ ನೋಡೆಲ್ ಅಧಿಕಾರಿಯಾಗಿ ನೇಮಕಗೊಂಡಿದ್ದ ಮೋದಿನಗರ ಉಪವಿಭಾಗದ ಮ್ಯಾಜಿಸಟ್ರೇಟರ್ ಸೌಮ್ಯಾ ಪಾಂಡೆ ಅವರು ಹೆರಿಗೆಯಾಗಿ ಕೇವಲ 15 ದಿನಗಳ ಬಳಿಕ ತಮ್ಮ ಪುಟ್ಟ ಕಂದಮ್ಮನೊಂದಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಈ ಕುರಿತು ಮಾತನಾಡಿರುವ ಸೌಮ್ಯ ಪಾಮಡೆ ಅವರು, ನಾನು ಐಎಎಸ್ ಅಧಿಕಾರಿಯಾಗಿದ್ದರಿಂದ ಕೋವಿಡ್-19 ಕರ್ತವ್ಯದೊಂದಿಗೆ ಹಲವಾರು ಜವಾಬ್ದಾರಿಗಳು ನನಗೆ ಇದೆ. ದೇವರು ಮಗುವಿಗೆ ಜನ್ಮ ನೀಡುವ ಮತ್ತು ಮಗುವನ್ನು ನೋಡಿಕೊಳ್ಳುವ ಶಕ್ತಿಯನ್ನು ನನಗೆ ನೀಡಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರು ಗರ್ಭಧಾರಣೆಯ ವೇಳೆ ಕೆಲಸವನ್ನು ಮಾಡುತ್ತಾರೆ. ಹೆರಿಗೆಯಾದ ಬಳಿಕವೂ ಅವರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಜೊತೆಗೆ ತಮ್ಮ ಮಗುವನ್ನು ನೋಡಿಕೊಳ್ಳುತ್ತಾರೆ. ಮನೆ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಹಾಗೆಯೇ ದೇವರ ಆಶೀರ್ವಾದದಿಂದ ನನಗೂ ನನ್ನ ಮೂರು ವಾರಗಳ ಹೆಣ್ಣು ಮಗುವಿನೊಂದಿಗೆ ಕಚೇರಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.










