ಚಿಕ್ಕಮಗಳೂರು : ವಿಚ್ಚೇದನ ನೀಡಲು ನಿರಾಕರಿಸಿದ್ದಕ್ಕೆ ಪತಿಯನ್ನು ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ದೊಡ್ಡಿಹಟ್ಟಿ ಗ್ರಾಮದಲ್ಲಿ ನಡೆದಿದೆ. ಪ್ರದೀಪ್(32) ಪತ್ನಿಯಿಂದಲೇ ಕೊಲೆಯಾದ ಪತಿ ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ಪತ್ನಿ ರಾಗಿಣಿ ಹಾಗೂ ಪ್ರಿಯತಮ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಮೃತ ಪ್ರದೀಪ್ ಹಾಗೂ ರಾಗಿಣಿ ಅವರು ಕಳೆದ 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಅವರಿಗೆ 10 ವರ್ಷದ ಮಗಳು ಹಾಗೂ 7 ವರ್ಷದ ಮಗನಿದ್ದಾನೆ. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಪ್ರದೀಪ್ ಅವರು ಮದ್ಯ ವ್ಯಸನಿಯಾಗಿದ್ದು, ಆಗಾಗ್ಗ ಗಂಡ-ಹೆಂಡತಿಯ ನಡುವೆ ಜಗಳವಾಗುತ್ತಿತ್ತು. ಮೃತ ಪ್ರದೀಪ್ ಹಾಗೂ ಶ್ರೀನಿವಾಸ್ ಇಬ್ಬರು ವೃತ್ತಿ ಮಿತ್ರರಾಗಿದ್ದು, ಕೆಲಸದ ಹಣ ನೀಡಲು ಶ್ರೀನಿವಾಸ್ ಅವರು ಆಗಾಗ್ಗ ಪ್ರದೀಪ್ ಅವರ ಮನೆಗೆ ಬಂದು ಹೋಗುತ್ತಿದ್ದರು. ಈ ವೇಳೆ ರಾಗಿಣಿ ಹಾಗೂ ಶ್ರೀನಿವಾಸ್ ನಡುವೆ ಪ್ರೇಮಾಂಕುರವಾಗಿದ್ದು, ಭಾನುವಾರ ರಾತ್ರಿ ರಾಗಿಣಿ ಹಾಗೂ ಶ್ರೀನಿವಾಸ್ ಜೊತೆಗಿರುವುದನ್ನು ಗಮನಿಸಿದ ಪತಿ ಪ್ರದೀಪ್ ಅವರೊಂದಿಗೆ ಜಗಳವಾಡಿದ್ದು, ಈ ವೇಳೆ ಪತ್ನಿ ರಾಗಿಣಿ ನನ್ನನ್ನು ಬಿಡು ಎಂದಿದ್ದಾರೆ. ಬಳಿಕ ಪ್ರಿಯತಮ ಶ್ರೀನಿವಾಸ್ ಕೂಡಾ ಅವಳಿಗೆ ವಿಚ್ಛೇದನ ನೀಡು, ಇಲ್ಲ ಬಿಟ್ಟುಬಿಡು ಎಂದು ಹೇಳಿದ್ದಾರೆ. ಇದಕ್ಕೆ ಪ್ರದೀಪ್ ಒಪ್ಪದೇ ಇದ್ದಾಗ ಪತ್ನಿ ರಾಗಿಣಿ ತನ್ನ ಪ್ರಿಯತಮ ಶ್ರೀನಿವಾಸ್ ನೊಂದಿಗೆ ಜೊತೆಗೂಡಿ ಪತಿಯನ್ನೇ ಕೊಲೆ ಮಾಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡ ಸಖರಾಯಪಟ್ಟಣ ಠಾಣಾ ಪೊಲೀಸರು ಆರೋಪಿಗಳಾದ ರಾಗಿಣಿ ಹಾಗೂ ಶ್ರೀನಿವಾಸ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.










