ಬೆಳಗಾವಿ : ಈ ಕೆಟ್ಟ ಅನುಭವದ ಮೇಲೆ ಇನ್ನೆಂದು ಕಾಂಗ್ರೆಸ್ ಸಹವಾಸ ಮಾಡಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು. ನಗರದಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಹವಾಸ ಮಾಡಿ ನನ್ನ 12 ವರ್ಷದ ಸಂಪಾದನೆ ಸರ್ವನಾಶವಾಯಿತು ಎಂಬ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಅಟ್ಟ ಮೇಲೆ ಒಲೆ ಉರಿಯಿತು, ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಗಾದೆ ಮಾತಿನಂತೆ ಕುಮಾರಸ್ವಾಮಿ ಅವರಿಗೆ ಕೆಟ್ಟ ಮೇಲೆ ಬುದ್ಧಿ ಬಂದಿದೆ. ಈ ಕೆಟ್ಟ ಅನುಭವದ ಮೇಲೆ ಇನ್ನೆಂದೂ ಕಾಂಗ್ರೆಸ್ ಸಹವಾಸ ಮಾಡಬೇಡಿ. ಬಹಳ ಹಿಂದೆಯೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕಾಂಗ್ರೆಸ್ ಒಂದು ಉರಿಯುವ ಮನೆ ಅದರ ಹತ್ತಿರ ಹೋಗಬೇಡಿ ಸುಟ್ಟುಹೋಗುತ್ತೀರ ಎಂದು ಹೇಳಿದ್ದರು. ಈ ನಿಲುವು ನಿಮ್ಮಲ್ಲಿ ಸದಾಕಾಲ ಇರಲಿ. ಚಂಚಲ ಮನಸ್ಥಿತಿಗೆ ಒಳಗಾಗುವುದಿಲ್ಲ ಎಂದು ನಾನು ಅಂದುಕೊಂಡಿದ್ದೇನೆ.
ಯಡಿಯೂರಪ್ಪ ಅವರು ಅಸಮರ್ಥ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಸಿದ್ದರಾಮಯ್ಯ ಅವರು ಇತ್ತೀಚೆಗೆ ವಿಚಿತ್ರ ವಿಚಿತ್ರವಾಗಿ ಮಾತನಾಡುವುದನ್ನು ನಾವು ಕೇಳುತ್ತಿದ್ದೇವೆ. ನನಗನಿಸಿದಂತೆ ಸಿದ್ದರಾಮಯ್ಯ ಅವರ ಮನೆತನದವರು ಗೋ ಸೇವೆ ಮಾಡಿದವರು. ಗೋಹತ್ಯೆ ಸಮರ್ಥಿಸಿದವರಲ್ಲ. ಆದರೆ ಅದೇ ಮನೆತನದ ಸಿದ್ದರಾಮಯ್ಯ ಅವರು ಇಂದು ಗೋಹತ್ಯೆ ಮಸೂದೆ ವಿರೋಧ ಮಾಡುತ್ತಿದ್ದಾರೆ. ಅಲ್ಲದೇ ರಾಮಮಂದಿರ ಸ್ಥಾಪನೆ ಮಾಡುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಇಂದು ರಾಮಮಂದಿರಕ್ಕೆ ಅಡಿಪಾಯ ಹಾಕಿದ್ದೇವೆ. ಆರ್ಟಿಕಲ್ 370 ರದ್ದು ಆಗುವುದಿಲ್ಲ ಎಂದೂ ಕೂಡಾ ಹೇಳುತ್ತಿದ್ದರು. ಅದನ್ನು ಮಾಡಿ ತೋರಿಸಿದ್ದೇವೆ. ಗೋಹತ್ಯೆ ನಿಷೇಧ ಕಾಯ್ದೆಯನ್ನು ನಾವಲ್ಲದೇ ಬೇರೆ ಯಾರು ಜಾರಿಗೆ ತರುತ್ತಾರೆ ಎಂದರು.










