ಮೂಡಿಗೆರೆ : ನಾಮಪತ್ರ ಹಿಂಪಡೆದು ಸುಂಕಸಾಲೆ, ಬಿ ಹೊಸಳ್ಳಿ ಗ್ರಾ.ಪಂಯಲ್ಲಿ ಅಭ್ಯರ್ಥಿಗಳಿಂದ ಚುನಾವಣೆ ಬಹಿಷ್ಕಾರ…

258
firstsuddi

ಕೊಟ್ಟಿಗೆಹಾರ : ಗ್ರಾ.ಪಂ ಚುನಾವಣೆಯ ನಾಮಪತ್ರ ಸಲ್ಲಿಸಿದ ಸುಂಕಸಾಲೆ, ಬಿ ಹೊಸಳ್ಳಿ ಗ್ರಾ.ಪಂಯ ಎಲ್ಲಾ ಅಭ್ಯರ್ಥಿಗಳು ಇಂದು ಕಸ್ತೂರಿರಂಗನ್ ವರದಿ ಕೈಬಿಡಬೇಕು ಎಂದು ಒತ್ತಾಯಿಸಿ ನಾಮಪತ್ರ ಹಿಂಪಡೆದಿದ್ದು ಚುನಾವಣೆ ಬಹಿಷ್ಕರಿಸಿದ್ದಾರೆ.
ಸುಂಕಸಾಲೆಯಲ್ಲಿ ಒಟ್ಟು 29 ನಾಮಪತ್ರ ಸಲ್ಲಿಕೆಯಾಗಿದ್ದು ಬಿ ಹೊಸಳ್ಳಿಯಲ್ಲಿ 17 ನಾಮಪತ್ರ ಸಲ್ಲಿಕೆಯಾಗಿತ್ತು. ಇಂದು ಎಲ್ಲಾ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಜಾವಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಒಟ್ಟು 28 ನಾಮಪತ್ರ ಸಲ್ಲಿಕೆಯಾಗಿತ್ತು. 1 ನಾಮಪತ್ರ ತಿರಸ್ಕøತಗೊಂಡಿದ್ದು ಮೇಗೂರು ಭಾಗದ ಅಭ್ಯರ್ಥಿಗಳಾದ ಪ್ರೀತಿ ಹಾಗೂ ಸುಶೀಲಾ ಎಂಬುವವರು ನೆರೆ ನಿರಾಶ್ರಿತರಿಗೆ ಸರ್ಕಾರ ಪುನರ್ವಸತಿ ಕಲ್ಪಿಸದೇ ಇರುವುದನ್ನು ಖಂಡಿಸಿ ನಾಮಪತ್ರ ಹಿಂಪಡೆದಿದ್ದಾರೆ.
ಈ ಬಗ್ಗೆ ಮಾತನಾಡಿದ ಮೇಗೂರಿನ ಪ್ರೀತಿ, ಕಳೆದ ವರ್ಷ ಅತಿವೃಷ್ಟಿಯಿಂದ ಮಲೆಮನೆಯಲ್ಲಿ ಹಲವರು ಮನೆ ಕಳೆದುಕೊಂಡರು. ಕೃಷಿಭೂಮಿಗೂ ಹಾನಿಯಾಗಿತ್ತು. ಆದರೆ ವರ್ಷ ಕಳೆದರೂ ಕೂಡ ಸರ್ಕಾರ ನೆರೆ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿಲ್ಲ. ಆದ್ದರಿಂದ ನಾಮಪತ್ರ ಹಿಂಪಡೆದಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಜಾವಳಿ ಗ್ರಾ.ಪಂ ಚುನಾವಣಾಧಿಕಾರಿ ಗಣೇಶ್, ಸಹಾಯಕ ಚುನಾವಣಾಧಿಕಾರಿ ಯೋಗೇಶ್, ಸುಂಕಸಾಲೆ ಗ್ರಾ.ಪಂ ಚುನಾವಣಾಧಿಕಾರಿ ಲೋಕೇಶ್, ಸಹಾಯಕ ಚುನಾವಣಾಧಿಕಾರಿ ಸತೀಶ್, ಬಿ ಹೊಸಳ್ಳಿ ಗ್ರಾ.ಪಂ ಚುನಾವಣಾಧಿಕಾರಿ ವಸಂತ್‍ಕುಮಾರ್, ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ್ ಇದ್ದರು.