ಚಿಕ್ಕಮಗಳೂರು : ಕೊಪ್ಪದ ಸಹಕಾರ ಸಾರಿಗೆ ಚಾಲಕನೊಬ್ಬ ನಿರುದ್ಯೋಗ ಸಮಸ್ಯೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಬಸ್ ಚಾಲಕನನ್ನು ಕೊಪ್ಪದ ಗಡಿಕಲ್ನ ಗೋಪಾಲ ಪೂಜಾರಿ (55) ಎಂದು ಗುರುತಿಸಲಾಗಿದ್ದು, ಇವರು ಸಹಕಾರ ಸಾರಿಗೆಯಲ್ಲಿ ದಿನಗೂಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ತಮ್ಮ ಸೋದರನ ಮನೆಯಲ್ಲಿ ವಿಷ ಕುಡಿದು ಸಾವಿಗೆ ಶರಣಾಗಿದ್ದಾರೆ.
ಕಳೆದ ಒಂದು ವರ್ಷದಿಂದ ಸಹಕಾರ ಸಾರಿಗೆ ಸಂಪೂರ್ಣ ಸ್ಥಗಿತವಾಗಿತ್ತು. ಸಹಕಾರ ಸಾರಿಗೆ ಸ್ಥಗಿತವಾಗಿರುವ ಕಾರಣ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದರೆಂದು ತಿಳಿದುಬಂದಿದೆ. ಅಲ್ಲದೇ ವಿವಿಧ ಸಂಘಗಳಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ ಗೋಪಾಲ್ ಅವರು ಕಳೆದ ಎರಡು ದಿನಗಳಿಂದ ಊರಿಗೂ ಹೋಗದೆ ಕೊಪ್ಪದಲ್ಲಿ ಸಹೋದರನ ಮನೆಯಲ್ಲೇ ಇದ್ದರು ಎಂದು ಹೇಳಲಾಗಿದೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರವಾರದ ಕಾರಣ ತಿಳಿದು ಬಂದಿಲ್ಲ.










