ಮುಂಬೈ : ಬಾಲಿವುಡ್ ನಿರ್ದೇಶಕರಾದ ಅನುರಾಗ್ ಕಶ್ಯಪ್ ಹಾಗೂ ನಟಿ ತಾಪ್ಸಿ ಪನ್ನು ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಅನುರಾಗ್ ಕಶ್ಯಪ್ ಅವರ ನಿರ್ಮಾಣ ಸಂಸ್ಥೆ ಫ್ಯಾಂಟಮ್ ಫಿಲಂಸ್ ಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ. ಈ ಇಬ್ಬರ ಸೆಲೆಬ್ರಿಟಿಗಳ ಮನೆಗಳು ಮಾತ್ರವಲ್ಲದೆ ಮುಂಬೈ ಹಾಗೂ ಪುಣೆಯಲ್ಲಿ 20 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ತೆರಿಗೆ ವಂಚನೆಗೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಿರ್ಮಾಪಕ ವಿಕಾಸ್ ಬೆಹಲ್, ಮಧು ಮಂತೇನಾ ಸೇರಿ ಇನ್ನಿತರ ನಟ-ನಟಿಯರು ಹಾಗೂ ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ನಡೆದಿದೆ. ಮಧು ಮಂತೇನಾ ‘ಕ್ವಾನ್’ ಮ್ಯಾನೇಜ್ಮೆಂಟ್ ಕಂಪನಿ ಕಚೇರಿಯನ್ನು ಕೂಡಾ ಐಟಿ ಅಧಿಕಾರಿಗಳು ಶೋಧಿಸಿದ್ದಾರೆ.
ತಾಪ್ಸಿ ಹಾಗೂ ಅನುರಾಗ್ ಕಶ್ಯಪ್ ಇಬ್ಬರೂ ‘ಮನ್ಮರ್ಜಿಯಾನ್’ ಸಿನಿಮಾದಿಂದ ಬಹಳ ಆತ್ಮೀಯ ಸ್ನೇಹಿತರು. 2 ವರ್ಷಗಳ ಹಿಂದೆ ಅನುರಾಗ್ ಕಶ್ಯಪ್ ಮೇಲೆ ಮಿ-ಟೂ ಆರೋಪ ಕೇಳಿಬಂದಾಗ ಕೂಡಾ ತಾಪ್ಸಿ ಪನ್ನು ಅನುರಾಗ್ ಕಶ್ಯಪ್ ಪರ ನಿಂತಿದ್ದರು. ಇದೀಗ ಇಬ್ಬರ ಮನೆ ಮೇಲೆ ಒಟ್ಟಿಗೆ ಐಟಿ ದಾಳಿ ಆಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.










