ನವದೆಹಲಿ : ಭಾರತೀಯ ರೈಲ್ವೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡುವುದಿಲ್ಲ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಇಂದು ಸ್ಪಷ್ಟಪಡಿಸಿದ್ದಾರೆ.
ರೈಲ್ವೆ ಇಲಾಖೆಯ ಬೇಡಿಕೆ ಮತ್ತು ಅನುದಾನದ ಕುರಿತು ಸಂಸತ್ತಿನಲ್ಲಿ ನಡೆಸಿದ ಚರ್ಚೆಯಲ್ಲಿ ಮಾತನಾಡಿದ ಅವರು, ಹಿಂದಿನಿಂದಲೂ ಭಾರತೀಯ ರೈಲ್ವೆ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಇನ್ನು ಮುಂದೆಯೂ ಅದು ಸರ್ಕಾರದ ನಿರ್ವಹಣೆಯಲ್ಲೇ ಇರಲಿದೆ. ಭಾರತೀಯ ರೈಲ್ವೇ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ರೈಲ್ವೆ ಅಪಘಾತದಿಂದಾಗಿ ಯಾವುದೇ ಪ್ರಯಾಣಿಕರ ಸಾವು ಸಂಭವಿಸಿಲ್ಲ ಎಂದು ಹೇಳಿದರು.
ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ದೇಶವು ಬೆಳವಣಿಗೆಯತ್ತ ಸಾಗಬಹುದು ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ಆದರೆ ಭಾರತೀಯ ರೈಲ್ವೆ ಎಂದಿಗೂ ಖಾಸಗೀಕರಣಗೊಳ್ಳುವುದಿಲ್ಲ. ಇದು ಪ್ರತಿಯೊಬ್ಬ ಭಾರತೀಯನ ಆಸ್ತಿಯಾಗಿದೆ.. ಹಾಗೆಯೇ ಉಳಿಯುತ್ತದೆ ಎಂದು ಸಚಿವರು ಹೇಳಿದರು.










