ದಾವಣಗೆರೆ : ಮಗಳು ಹಾಗೂ ಮೊಮ್ಮಗಳ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಹೆತ್ತ ತಂದೆಯನ್ನೇ ಹತ್ಯೆ ಮಾಡಿರುವ ಘಟನೆ ಹೊನ್ನಾಳಿ ತಾಲ್ಲೂಕಿನ ಕುಳಗಟ್ಟೆಯಲ್ಲಿ ನಡೆದಿದೆ.
ಹೊನ್ನಾಳಿಯ ಕುಳಗಟ್ಟೆ ಗ್ರಾಮದ ಶ್ರೀನಿವಾಸ್, ಸಿಂಧು ಮತ್ತು ಉಷಾ ಬಂಧಿತ ಆರೋಪಿಗಳಾಗಿದ್ದು, ಮೃತನನ್ನು ಮಂಜಪ್ಪ (70) ಎಂದು ಗುರುತಿಸಲಾಗಿದೆ.
ಮಂಜಪ್ಪ ಅವರ ಪುತ್ರಿ ಉಷಾ, ಮೊಮ್ಮಗಳಾದ ಸಿಂಧು, ಕುಳಗಟ್ಟೆ ಗ್ರಾಮದ ಶ್ರೀನಿವಾಸ್ ಜತೆಗೆ ಅಕ್ರಮ ಸಂಬಂಧ ಹೊಂದಿದ್ದರು. ಈ ಬಗ್ಗೆ ತಿಳಿದುಕೊಂಡ ಮಂಜಪ್ಪ ಮಗಳು ಮತ್ತು ಮೊಮ್ಮಗಳಿಗೆ ಜೀವನದಲ್ಲಿ ನೀತಿವಂತರಾಗಿ ಬಾಳಬೇಕೆಂದು ಬುದ್ಧಿಮಾತು ಹೇಳಿದ್ದರು. ಇದರಿಂದ ಕೋಪಗೊಂಡ ಉಷಾ ತನ್ನ ಪ್ರಿಯತಮ ಶ್ರೀನಿವಾಸ್ ಜತೆ ಸೇರಿ ತಂದೆಯನ್ನೇ ಕೊಲೆ ಮಾಡಲು ಸ್ಕೆಚ್ ಹಾಕಿದ್ದಳು.
ಪ್ಲಾನ್ ಪ್ರಕಾರ ಮಂಜಪ್ಪನನ್ನು ತೋಟಕ್ಕೆ ಕರೆದುಕೊಂಡು ಹೋಗಿ ಕುಡಿಸಿದ್ದಾರೆ. ಬಳಿಕ ಮತ್ತಿನಲ್ಲಿದ್ದ ಮಂಜಪ್ಪನ ತಲೆ ಮೇಲೆ ಶ್ರೀನಿವಾಸ ಕಲ್ಲಿನಿಂದ ಹೊಡೆದು ಪಕ್ಕದ ಚಾನಲ್ ನೀರಿಗೆ ಹಾಕಿದ್ದ. ಬಳಿಕ ಮಂಜಪ್ಪ ಎರಡ್ಮೂರು ವಾರಗಳಿಂದ ಕಾಣ್ತಿಲ್ಲ ಎಂದು ಮೊದಲನೇ ಹೆಂಡ್ತಿಯ ಮಗಳು ಮತ್ತು ಮೊಮ್ಮಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಎರಡನೇ ಹೆಂಡ್ತಿಯ ಮಗಳಾದ ಉಷಾ ಹಾಗೂ ಆಕೆಯ ಮಗಳು ಸಿಂಧುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಮಂಜಪ್ಪನ ಕೊಲೆಗೆ ಉಷಾ ಹಾಗೂ ಸಿಂಧು ಇಬ್ಬರು ಪ್ಲಾನ್ ಮಾಡಿ ಶ್ರೀನಿವಾಸನಿಂದ ಕೊಲೆ ಮಾಡಿಸಿರುವುದರ ತಿಳಿದು ಬಂದಿದೆ.