ಚೆನ್ನೈ: ತಮಿಳುನಾಡಿನಲ್ಲಿ ಇಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಬೆಳಗ್ಗೆ 7ರಿಂದ ಮತದಾನ ಆರಂಭವಾಗಿದೆ. ತಮಿಳು ಚಿತ್ರರಂಗದ ಖ್ಯಾತ ನಟರಾದ ರಜನಿಕಾಂತ್ ಹಾಗೂ ಕಮಲ ಹಾಸನ್ ಅವರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.
ಇಂದು ಬೆಳ್ಳಂಬೆಳಗ್ಗೆ ಚಿತ್ರನಟ ಹಾಗೂ ಮಕ್ಕಳ್ ನೀಧಿ ಮಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ತಮ್ಮ ಪುತ್ರಿಯರಾದ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್ ಜೊತೆ ಚೆನ್ನೈನ ತೈನಾಂಪೆಟ್ನ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಅಲ್ಲದೇ ಸೂಪರ್ ಸ್ಟಾರ್ ನಟ ರಜಿನಿಕಾಂತ್ ಸಹ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ರಜನಿಕಾಂತ್ ಅವರು ಚೆನ್ನೈನ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದ ಸ್ಟೆಲ್ಲಾ ಮೇರಿಸ್ ಕಾಲೇಜಿನಲ್ಲಿ ಮತ ಚಲಾಯಿಸಿದರು.










