ಚಿಕ್ಕಮಗಳೂರು : ವೀರಶೈವ ಲಿಂಗಾಯತ ಸಮುದಾಯದ ಜನ ತಮ್ಮ ಒಳ ಪಂಗಡಗಳಲ್ಲಿರುವ ವೈರುಧ್ಯಗಳನ್ನು ಬದಿಗೊತ್ತಿ ಒಂದಾಗಬೇಕು : ಬಿ.ವೈ.ರಾಘವೇಂದ್ರ.

140
firstsuddi

ಚಿಕ್ಕಮಗಳೂರು : ವೀರಶೈವ ಲಿಂಗಾಯತ ಸಮುದಾಯದ ಜನ ತಮ್ಮ ಒಳ ಪಂಗಡಗಳಲ್ಲಿರುವ ವೈರುಧ್ಯಗಳನ್ನು ಬದಿಗೊತ್ತಿ ಒಂದಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸಲಹೆ ಮಾಡಿದರು.

ವೀರಶೈವ ಮಹಾಸಭಾ ನಗರದ ಗೃಹಮಂಡಳಿ ಬಡಾವಣೆಯಲ್ಲಿ ನಿರ್ಮಿಸಲಿರುವ ಸಮುದಾಯ ಭವನದ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ವೀರಶೈವ ಲಿಂಗಾಯತ ಸಮುದಾಯದವರು ಒಳ ಪಂಗಡಗಳ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗಿ ಸಾಗಿದರೆ ಆ ಧರ್ಮದ ಶಕ್ತಿ ಇನ್ನಷ್ಟು ವೃದ್ದಿಸುತ್ತದೆ, ಆ ಸಮಾಜವನ್ನು ಯಾರೂ ಮುಟ್ಟಲು ಸಾಧ್ಯವಾಗುವುದಿಲ್ಲ ಎಂದು ಕಿವಿಮಾತು ಹೇಳಿದರು.

ಮುಂದಿನ ಪೀಳಿಗೆ ನೆನಪು ಮಾಡಿಕೊಳ್ಳುವಂತೆ ಈ ಜಾಗದಲ್ಲಿ ಸಮುದಾಯ ಭವನ, ವಿದ್ಯಾ ಸಂಸ್ಥೆಯನ್ನು ಉತ್ತಮವಾಗಿ ನಿರ್ಮಿಸಬೇಕು ಆದಷ್ಟು ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿ ಶಾಸಕ ಸಿ.ಟಿ.ರವಿ ಅವರೊಂದಿಗೆ ಚರ್ಚಿಸಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಟಿ.ರವಿ ವೀರಶೈವ ಮಹಾಸಭಾದ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ದು ಹೆಚ್ಚಿನ ಅನುದಾನ ಕೊಡಿಸುವುದರ ಜೊತೆಗೆ ಭವನಕ್ಕೆ ಉತ್ತಮ ರಸ್ತೆ ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.
ವೀರಶೈವ ಲಿಂಗಾಯತ ಅಭಿವೃದ್ದಿ ನಿಮಗದ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ ಮಾತನಾಡಿ ನಿರ್ಮಾಣ ಕಾಮಗಾರಿಗೆ ನಿಗಮದಿಂದ ಸಹಕಾರ ನೀಡುವ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರಶೈವ ಮಹಾಸಭಾದ ಅಧ್ಯಕ್ಷ ಬಿ.ಎ.ಶಿವಶಂಕರ್ ಸಮುದಾಯ ಭವನದ ನಿರ್ಮಾಣ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲು ಪ್ರಯತ್ನಿಸಲಿದ್ದು, ಎಲ್ಲರೂ ಸಹಕಾರ ಮತ್ತು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಮಹಾಸಭಾದ ಉಪಾಧ್ಯಕ್ಷ ಹೆಚ್.ಎಂ.ರೇಣುಕಾರಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾನಿ ರವಿಶಂಕರ್ ನಾಮಫಲಕವನ್ನು ಅನಾವರಣಗೊಳಿಸಿದರು.

ಕೆ.ಪಿ.ಎಸ್.ಸಿ ಮಾಜಿ ಅಧ್ಯಕ್ಷ ಷಡಾಕ್ಷರ ಸ್ವಾಮಿ, ಮಾಜಿ ಸಚಿವ ಸಗೀರ್ ಅಹಮದ್, ವಾರ್ತಾ ಸಚಿವರ ಆಪ್ತಕಾರ್ಯದರ್ಶಿ ವಿರೂಪಾಕ್ಷ, ಉದ್ಯಮಿ ಜ್ಯೋತಿ ಪ್ರಕಾಶ್, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ಎಂ.ಲೋಕೇಶ್, ನಗರ ವೀರಶೈವ ಸಮಾಜದ ಅಧ್ಯಕ್ಷ ಸಿ.ಬಿ.ಮಲ್ಲೇಗೌಡ, ಸಿ.ಡಿ.ಎ ಅಧ್ಯಕ್ಷ ಆನಂದ್, ಮಹಾಸಭಾದ ಉಪಾಧ್ಯಕ್ಷರಾದ ಹೆಚ್.ಎನ್.ನಂಜೇಗೌಡ, ಎಂ.ಎಸ್.ನಿರಂಜನ್, ಕಾರ್ಯದರ್ಶಿ ಡಿ.ಎಸ್.ಮಮತಾ, ಖಜಾಂಚಿ ಎಸ್.ದೇವರಾಜು ಉಪಸ್ಥಿತರಿದ್ದರು.

ಮಹಾಸಭಾದ ನಿರ್ದೇಶಕ ಹೆಚ್.ಡಿ.ತಮ್ಮಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು, ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದ ಸ್ವಾಮಿ ಸ್ವಾಗತಿಸಿದರು, ಸಹಕಾರ್ಯದರ್ಶಿ ಸಿ.ಬಿ.ನಂದೀಶ್ ವಂದಿಸಿದರು.