ಕುಂಭಮೇಳವನ್ನು ಸಾಂಕೇತಿಕವಾಗಿ ನಡೆಸಿ ಟ್ವೀಟ್ ಮೂಲಕ ಮೋದಿ ಮನವಿ…

99
firstsuddi

ನವದೆಹಲಿ : ದೇಶದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದು, ಈ ಮಧ್ಯೆ ಉತ್ತರ ಪ್ರದೇಶದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ ಇನ್ನಷ್ಟು ಆತಂಕವನ್ನು ಸೃಷ್ಟಿಸಿದೆ. ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವಾಗ ಕುಂಭಮೇಳ ನಡೆಸುವ ಅನಿವಾರ್ಯತೆ ಏನಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಸಾಂಕೇತಿಕ ಕುಂಭಮೇಳ ನಡೆಸಲು ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ಕುಂಭಮೇಳ ಸಾಂಕೇತಿಕವಾಗಿ ನಡೆಯಲಿ, ಕುಂಭಮೇಳದಲ್ಲಿ ಅನೇಕರು ಸೋಂಕಿಗೆ ಒಳಗಾಗಿದ್ದಾರೆ. ಹೀಗಾಗಿ ಈ ಬಗ್ಗೆ ಸ್ವಾಮಿ ಅವಧೇಶಾನಂದ ಗಿರಿ ಜಿ ಅವರೊಂದಿಗೆ ಇಂದು ಫೋನ್ ಮೂಲಕ ಮಾತನಾಡಿದ್ದಾನೆ. ಈ ವೇಳೆ ಎಲ್ಲಾ ಸಂತರ ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ. ಕುಂಭಮೇಳವನ್ನು ಸಾಂಕೇತಿಕವಾಗಿ ನಡೆಸಿ ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನೂ ಪ್ರಧಾನಿ ಮೋದಿಯವರ ಮನವಿಗೆ ಪ್ರತಿಕ್ರಯಿಸಿರುವ ಹಿಂದೂ ಆಚಾರ್ಯ ಸಭಾ ಅಧ್ಯಕ್ಷ ಸ್ವಾಮಿ ಅವಧೇಶಾನಂದ ಗಿರಿ ಅವರು, ಪ್ರಧಾನಮಂತ್ರಿ ಅವರ ಮನವಿಯನ್ನು ನಾವು ಗೌರವಿಸುತ್ತೇವೆ. ಕೊರೊನಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಶಾಹಿ ಸ್ನಾನಕ್ಕೆ ಬರದಂತೆ ನಾನು ವಿನಂತಿಸುತ್ತೇನೆ. ಕೊರೊನಾ ಮುನ್ನೆಚ್ಚರಿಕಾ ನಿಯಮಗಳನ್ನು ಎಲ್ಲರೂ ಪಾಲಿಸುವಂತೆ ವಿನಂತಿಸುತ್ತೇನೆ.” ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.